2024ರ ಜುಲೈ 30ರಂದು ತೀವ್ರ ಭೂಕುಸಿತ ಸಂಭವಿಸಿದ್ದ ವಯನಾಡ್ ಜಿಲ್ಲೆಯ ಪ್ರದೇಶಗಳ ಪಕ್ಷಿನೋಟ
ತಿರುವನಂತಪುರ: ಕಳೆದ ಜುಲೈ 30ರಂದು ಸುರಿದ ಭಾರಿ ಮಳೆ ಮತ್ತು ಭೂಕುಸಿತದಲ್ಲಿ ನಾಪತ್ತೆಯಾದವರ ಪತ್ತೆ ಈವರೆಗೂ ಆಗದಿರುವ ಕಾರಣ, ಅವರನ್ನು ಮೃತರು ಎಂದು ಕೇರಳ ಸರ್ಕಾರ ಬುಧವಾರ ಘೋಷಿಸಲು ಅಗತ್ಯ ಕ್ರಮಕ್ಕೆ ಮುಂದಾಗಿದೆ.
ಇದರಿಂದ ವ್ಯಕ್ತಿಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಕಾರ್ಯ ಚುರುಕುಗೊಳಿಸಲು ಅನುಕೂಲವಾಗಲಿದೆ. ನಾಪತ್ತೆಯಾದವರ ಪಟ್ಟಿ ಮಾಡಿ ಪರಿಶೀಲಿಸಲು ಕಂದಾಯ ಇಲಾಖೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.
ಸಮಿತಿಯಲ್ಲಿ ಪಂಚಾಯ್ತಿ ಕಾರ್ಯದರ್ಶಿ, ಗ್ರಾಮಾಧಿಕಾರಿ ಹಾಗೂ ಸಂಬಂಧ ಪಟ್ಟ ಪೊಲೀಸ್ ಠಾಣೆಯ ಅಧಿಕಾರಿ ಇರಲಿದ್ದಾರೆ. ನಾಪತ್ತೆಯಾದವರ ಹೆಸರಿನ ಪಟ್ಟಿ ಮಾಡಿ, ಅದನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪರಿಶೀಲನೆಗಾಗಿ ಕಳುಹಿಸಲಿದ್ದಾರೆ. ಈ ಪಟ್ಟಿ ನಂತರ ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಕೆಯಾಗಲಿದೆ. ರಾಜ್ಯ ಸಮಿತಿಯಲ್ಲಿ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಹಾಗೂ ಸ್ಥಳೀಯ ಆಡಳಿತದ ಪ್ರಧಾನ ಕಾರ್ಯದರ್ಶಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ಈ ಪಟ್ಟಿಯನ್ನು ಆಧರಿಸಿ ನಾಪತ್ತೆಯಾದ ವ್ಯಕ್ತಿಗಳನ್ನು ಮೃತರು ಎಂದು ಸರ್ಕಾರ ಘೋಷಿಸಿ, ಅವರ ಕುಟುಂಬಗಳಿಗೆ ಪರಿಹಾರ ವಿತರಿಸಲಿದೆ. ಸದ್ಯದ ಅಧಿಕೃತ ಮಾಹಿತಿ ಪ್ರಕಾರ ದುರಂತದಲ್ಲಿ 263 ಜನ ಮೃತಪಟ್ಟು, 35 ಮಂದಿ ನಾಪತ್ತೆಯಾಗಿದ್ದರು. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಸಲ್ಲಿಕೆಯಾದ ನಾಪತ್ತೆ ದೂರನ್ನು ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾದವರ ಹಾಗೂ ಪತ್ತೆಯಾದವರ ಕುರಿತು ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ತಹಶೀಲ್ದಾರ್ ಅಥವಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಪ್ರಕಟಣೆ ಹೊರಡಿಸಲಿದ್ದಾರೆ. ಇದಕ್ಕೆ ಆಕ್ಷೇಪ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರ ನಾಪತ್ತೆಯಾದವರನ್ನು ಮೃತರು ಎಂದು ಘೋಷಿಸಿ, ಅವರ ಕುಟುಂಬದವರಿಗೆ ತ್ವರಿತವಾಗಿ ಮರಣ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.