ಕೊಚ್ಚಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬನಿಗೆ ವಿವಾಹವಾಗಲು ಕೇರಳ ಹೈಕೋರ್ಟ್ ಶುಕ್ರವಾರ 15 ದಿನಗಳ ಪೆರೋಲ್ ನೀಡಿದೆ.
ಜುಲೈ 13 ರಂದು ಮದುವೆಯಾಗಲು ಅವಕಾಶ ನೀಡುವಂತೆ ಕೋರಿ ಅಪರಾಧಿ ಪ್ರಶಾಂತ್ ಅವರ ಪರವಾಗಿ ಅವರ ತಾಯಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ ಕುನ್ಹಿಕೃಷ್ಣನ್ ಅವರು ಪೆರೋಲ್ ನೀಡಿ ಆದೇಶಿಸಿದ್ದಾರೆ.
ನ್ಯಾಯಾಲಯವು ಜುಲೈ 12 ರಿಂದ 15 ದಿನಗಳ ಕಾಲ ಅವರಿಗೆ ಪೆರೋಲ್ ಮಂಜೂರು ಮಾಡಿದೆ. ಜುಲೈ 26 ರಂದು ಸಂಜೆ 4 ಗಂಟೆಯೊಳಗೆ ಜೈಲಿಗೆ ಹಿಂತಿರುಗಬೇಕೆಂದು ನಿರ್ದೇಶಿಸಿದ್ದಾರೆ.
ಪೆರೋಲ್ ಅರ್ಜಿಯನ್ನು ವಜಾಗೊಳಿಸಿದ್ದ ವಿಯ್ಯೂರು ಜೈಲಿನ ಅಧೀಕ್ಷಕರ ಆದೇಶವನ್ನು ಪ್ರಶ್ನಿಸಿ ಅಪರಾಧಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಪರಾಧಿಯನ್ನು ಮದುವೆಯಾಗಲು ಆ ಹುಡುಗಿ ನಿರ್ಧರಿಸಿದ್ದಾರೆ. ಆ ದೃಷ್ಟಿಕೋನದಿಂದ ಪ್ರಕರಣವನ್ನು ನೋಡುತ್ತಿರುವುದಾಗಿ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರವೂ ಅವಳ ಪ್ರೀತಿ ಹಾಗೆಯೇ ಇದೆ. ತನ್ನ ಸಂಗಾತಿ ಜೈಲಿನಲ್ಲಿದ್ದು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆಂದು ತಿಳಿದಿದ್ದರೂ, ಆಕೆ ಆತನನ್ನು ಮದುವೆಯಾಗಲು ಸಿದ್ಧವಾಗಿದ್ದಾಳೆ. ಆಕೆಯ ಧೈರ್ಯಶಾಲಿ ನಿಲುವನ್ನು ನ್ಯಾಯಾಲಯ ನಿರ್ಲಕ್ಷಿಸಲು ಸಾಧ್ಯವಿಲ್ಲ. ನನಗಿರುವ ವಿಶೇಷ ಕಾರ್ಯವ್ಯಾಪ್ತಿಯನ್ನು ಮೀರಿ ಅಪರಾಧಿಗೆ 15 ದಿನಗಳ ಅವಧಿಗೆ ಪೆರೋಲ್ ನೀಡುತ್ತಿದ್ದೇನೆ ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆದೇಶದಲ್ಲಿ ನ್ಯಾಯಮೂರ್ತಿಗಳು ಅಮೆರಿಕದ ಖ್ಯಾತ ಕವಯಿತ್ರಿ ಮಾಯಾ ಏಂಜೆಲೋ ಬರೆದ, 'ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಅದು ತನ್ನ ಎಲ್ಲಾ ಎಲ್ಲೆಗಳನ್ನು ಮೀರಿ ಗುರಿ ಮುಟ್ಟುತ್ತದೆ' ಎಂಬ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಆ ಹುಡುಗಿ ಸಂತೋಷವಾಗಿರಲಿ ಎಂದು ಈ ನ್ಯಾಯಾಲಯ ಆಶೀರ್ವಾದಿಸುತ್ತದೆ ಎಂದೂ ನ್ಯಾಯಾಮೂರ್ತಿ ಹೇಳಿದ್ದಾರೆ.
ತನ್ನ ಮಗನಿಗೆ ಶಿಕ್ಷೆಯಾಗುವ ಮೊದಲೇ ಅವನ ಮದುವೆ ನಿಶ್ಚಯವಾಗಿತ್ತು ಎಂದು ಅಪರಾಧಿಯ ತಾಯಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.