
ಕೇರಳದಲ್ಲಿ ಭಾರಿ ಮಳೆ
ಪಿಟಿಐ ಚಿತ್ರ
ತಿರುವನಂತಪುರ: ಕೇರಳದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ದೋಣಿ ಮಗುಚಿ ಮೀನುಗಾರರೊಬ್ಬರು ಮೃತಪಟ್ಟಿದ್ದು, ಸಿಡಿಲು ಬಡಿದು ಪಶ್ಚಿಮ ಬಂಗಳಾದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಆರ್ತುಂಗಳ್ ಕರಾವಳಿ ಪ್ರದೇಶದ ಪೌಲ್ ದೇವಸ್ಯ ಎಂಬುವರು ಸೋಮವಾರ ಬೆಳಿಗ್ಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ವೇಗವಾಗಿ ಗಾಳಿ ಬೀಸಿದ್ದರಿಂದ ಇವರಿದ್ದ ದೋಣಿಯು ಮುಗುಚಿದೆ. ಇತರೆ ಮೀನುಗಾರರು ಇವರನ್ನು ರಕ್ಷಿಸಿದರಾದರೂ ಬಳಿಕ ಮೃತಪಟ್ಟರು. ಅಂಗಮಾಲಿ ಬಳಿಯ ಪಶ್ಚಿಮ ಬಂಗಾಳದ ಕೊಕ್ಕನ್ ಮಿಸ್ತ್ರಿ ಎಂಬುವರು ತಮ್ಮ ಮನೆಯಲ್ಲಿ ಇರುವಾಗ ಬೆಳಿಗ್ಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಕೊಯಿಕ್ಕೋಡ್, ಕಣ್ಣೂರು, ಕಾಸರಗೋಡು, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 11.5 ಸೆಂ.ಮೀನಿಂದ 20.4 ಸೆಂ.ಮೀನಷ್ಟು ಮಳೆ ಸುರಿಯಲಿದೆ ಎಂದು ಇಲಾಖೆ ಅಂದಾಜಿಸಿದೆ.
ವಯನಾಡ್, ಮಲ್ಲಪ್ಪುರಂ, ಪಾಲಕ್ಕಾಡ್, ತ್ರಿಶ್ಶೂರ್, ಎರ್ನಾಕುಲಂ, ಇಡುಕ್ಕಿ ಮತ್ತು ಆಲಪ್ಪುಳ ಜಿಲ್ಲೆಗಳಿಗೆ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ 6.4 ಸೆಂ.ಮೀನಿಂದ 11.5 ಸೆಂ.ಮೀನಷ್ಟು ಮಳೆಯಾಗಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವೇಗವಾಗಿ ಗಾಳಿ ಬೀಸಲಿದ್ದು, ಮಂಗಳವಾರವೂ ಭಾರಿ ಮಳೆಯಾಗಬಹುದು ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.