ADVERTISEMENT

ಐಸಿಸ್ ಸೇರಿದ 32 ಮಹಿಳೆಯರ ಪುರಾವೆ ನೀಡಿದರೆ ₹11 ಲಕ್ಷ ನೀಡುತ್ತೇನೆ: ವಕೀಲ

ಪಿಟಿಐ
Published 1 ಮೇ 2023, 14:02 IST
Last Updated 1 ಮೇ 2023, 14:02 IST
‘ದಿ ಕೇರಳ ಸ್ಟೋರಿ’ ಚಿತ್ರದ ಪೋಸ್ಟರ್
‘ದಿ ಕೇರಳ ಸ್ಟೋರಿ’ ಚಿತ್ರದ ಪೋಸ್ಟರ್   

ತಿರುವನಂತಪುರ: ‘ದಿ ಕೇರಳ ಸ್ಟೋರಿ’ ಸಿನಿಮಾ ಅಭಿವ್ಯಕ್ತಿ ಸ್ವಾತಂತ್ರ್ಯ ವಿಷಯದ ಬಗ್ಗೆ ರಾಜ್ಯದಲ್ಲಿ ರಾಜಕೀಯ ಚರ್ಚೆ ಹುಟ್ಟುಹಾಕುತ್ತಿದ್ದಂತೆ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ ವಿಶೇಷ ವಿವಾಹ ಕಾಯ್ದೆ (ಎಸ್ಎಂಎ) ಅಡಿ ತನ್ನ ಪತ್ನಿಯನ್ನು ಮರುಮದುವೆ ಮಾಡಿಕೊಂಡ ಮುಸ್ಲಿಂ ವಕೀಲರೊಬ್ಬರು, ಕೇರಳದ 32 ಮಹಿಳೆಯರು ಮತಾಂತರಗೊಂಡು ಐಎಸ್‌ಗೆ ಸೇರ್ಪಡೆಗೊಂಡಿರುವುದು ಸಾಬೀತುಪಡಿಸಿದರೆ ₹ 11 ಲಕ್ಷ  ನೀಡುವುದಾಗಿ ಹೇಳಿದ್ದಾರೆ.

ವಕೀಲ ಮತ್ತು ನಟ ಸಿ.ಶುಕ್ಕೂರ್, ಎಸ್ಎಂಎ ಅಡಿ ತನ್ನ ಪತ್ನಿಯನ್ನು ಮರು ಮದುವೆ ಮಾಡಿಕೊಂಡಿದ್ದು, ಚಿತ್ರದಲ್ಲಿ ಹೇಳಿರುವಂತೆ ಮತಾಂತರಗೊಂಡು ಐಎಸ್‌ ಸೇರಿದ 32,000 ಮಹಿಳೆಯರ ಪುರಾವೆಗಳನ್ನು ತೋರಿಸುವ ಅಗತ್ಯವಿಲ್ಲ. ಕೇವಲ 32 ಪುರಾವೆ ನೀಡಿದರೆ ಸಾಕು ಎಂದು ತಿಳಿಸಿದ್ದಾರೆ.

ಅದಾ ಶರ್ಮಾ ಅಭಿನಯದ ‘ದಿ ಕೇರಳ ಸ್ಟೋರಿ’ ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸುದೀಪ್ತೋ ಸೇನ್ ಬರೆದು ನಿರ್ದೇಶಿಸಿರುವ ಈ ಸಿನಿಮಾದ ಟ್ರೇಲರ್‌ನಲ್ಲಿ ಕೇರಳದ 32 ಸಾವಿರ ಮಹಿಳೆಯರು ಮತಾಂತರಗೊಂಡು ಐಎಸ್‌ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬುದಾಗಿ ಹೇಳಲಾಗಿದೆ.

ADVERTISEMENT

ಆದರೆ, ಆಡಳಿತಾರೂಢ ಸಿಪಿಎಂ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಸಿನಿಮಾವು ಸಾಕ್ಷ್ಯಗಳಿಲ್ಲದ ಸುಳ್ಳು ಕಥೆ ಹೊಂದಿದೆ ಎಂದು ಹೇಳಿದ್ದಾರೆ.

‘ಕೇರಳದ ಮುಸ್ಲಿಂ ಯುವಕರ ಮೂಲಕ ಇಸ್ಲಾಂಗೆ ಮತಾಂತರಗೊಂಡ ಮತ್ತು ಐಎಸ್‌ ಸದಸ್ಯರಾಗಿರುವ ಮಹಿಳೆಯರ ಹೆಸರು, ವಿಳಾಸಗಳ ಮಾಹಿತಿ ಪ್ರಕಟಿಸುವವರಿಗೆ ₹11 ಲಕ್ಷ ನೀಡುತ್ತೇನೆ‘ ಎಂದು ಶುಕ್ಕೂರ್‌ ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

ಪಾಲಕ್ಕಾಡ್ ಮೂಲದ ಇಬ್ಬರು ಸಹೋದರರನ್ನು ಮದುವೆಯಾದ ಮೂವರು ಮಹಿಳೆಯರು ಕೇರಳದ ಮುಸ್ಲಿಂ ಸಮುದಾಯದ ಹೊರಗಿನಿಂದ ಐಎಸ್‌ಗೆ ಸೇರಿದ ಪ್ರಕರಣಗಳಾಗಿವೆ ಎಂದು ಅವರು ಹೇಳಿದರು.

‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ಮಾಪಕರ ವಿರುದ್ಧ ಭಾನುವಾರ ಹರಿಹಾಯ್ದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಲವ್‌ ಜಿಹಾದ್‌ ಹೆಸರಿನಲ್ಲಿ ಕೇರಳವನ್ನು ಧಾರ್ಮಿಕ ಉಗ್ರವಾದದ ಕೇಂದ್ರ ಎಂಬುದಾಗಿ ಬಿಂಬಿಸುತ್ತಿರುವ ಸಂಘ ಪರಿವಾರದ ಸುಳ್ಳನ್ನು ಪ್ರಚುರಪಡಿಸುವ ಕೆಲಸವನ್ನು ಈ ಸಿನಿಮಾದ ಮೂಲಕ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಲವ್‌ ಜಿಹಾದ್‌ ಎಂಬ ಪರಿಕಲ್ಪನೆಯನ್ನು ನ್ಯಾಯಾಲಯಗಳು, ತನಿಖಾ ಸಂಸ್ಥೆಗಳು ಅಲ್ಲದೆ ಕೇಂದ್ರ ಗೃಹಸಚಿವಾಲಯವೂ ತಿರಸ್ಕರಿಸಿದೆ ಎಂದೂ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.