ADVERTISEMENT

ಪಿಣರಾಯಿ ಪ್ರಾಬಲ್ಯ ಕೊನೆಗಾಣಿಸಲು ಪಣ; ರಾಜೀನಾಮೆ ನೀಡಿ ಟಿಎಂಸಿ ಸೇರಿದ ಕೇರಳ ಶಾಸಕ

ಪಿಟಿಐ
Published 13 ಜನವರಿ 2025, 6:24 IST
Last Updated 13 ಜನವರಿ 2025, 6:24 IST
<div class="paragraphs"><p>ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್</p></div>

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

   

ತಿರುವನಂತಪುರ: ಪಕ್ಷೇತರ ಶಾಸಕ ಪಿ.ವಿ. ಅನ್ವರ್‌ ಅವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ.

ಅನ್ವರ್‌ ಅವರು, ಮಲಪ್ಪುರಂ ಜಿಲ್ಲೆಯ ನೀಲಂಬೂರ್‌ ಕ್ಷೇತ್ರದಲ್ಲಿ ಎಡ ಪಕ್ಷಗಳ ಬೆಂಬಲದೊಂದಿಗೆ ಎರಡು ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಈ ಕ್ಷೇತ್ರವು, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರತಿನಿಧಿಸುವ ವಯನಾಡ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ADVERTISEMENT

ಎಡ ಪಕ್ಷಗಳ ನಾಯಕರೊಂದಿಗೆ ಸಂಬಂಧ ಹಳಸಿದ ಬೆನ್ನಲ್ಲೇ, ಅನ್ವರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

ಟಿಎಂಸಿಯು, ಅನ್ವರ್‌ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷದ ಸಂಚಾಲಕರಾಗಲಿದ್ದಾರೆ ಎಂದು ಶುಕ್ರವಾರವೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು. ಅನರ್ಹತೆ ಭೀತಿಯಿಂದಾಗಿ ಅನ್ವರ್‌ ಅವರು ಶಾಸಕತ್ವ ತೊರೆದಿದ್ದಾರೆ.

ವಿಧಾನಸಭಾ ಸ್ಪೀಕರ್‌ ಎ.ಎನ್‌.ಶಂಸೀರ್‌ ಅವರಿಗೆ ಸೋಮವಾರ ರಾಜೀನಾಮೆ ಸಲ್ಲಿಸಿರುವ ಅವರು, ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಾಬಲ್ಯವನ್ನು ಕೊನೆಗಾಣಿಸುವ ಸಲುವಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ಪಿಣರಾಯಿ ಸರ್ಕಾರದ ಪತನಕ್ಕೆ ಉಪ ಚುನಾವಣೆಯೊಂದಿಗೆ ಕ್ಷಣಗಣನೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಮಲಪ್ಪುರಂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿ.ಎಸ್‌.ಜಾಯ್‌ ಅವರನ್ನು ಕಣಕ್ಕಿಳಿಸುವಂತೆ 'ಕೈ'ಗೆ ಒತ್ತಾಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.