ಸಾಂದರ್ಭಿಕ ಚಿತ್ರ
ತಿರುವನಂತಪುರ: ದೇಶದಲ್ಲಿ ಮೊದಲ ಬಾರಿಗೆ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕವಾಗಿ ಬಜೆಟ್ (Elderly Budget) ಮಂಡಿಸಿದ ಕೀರ್ತಿಗೆ ಕೇರಳ ರಾಜ್ಯ ಪಾತ್ರವಾಗಿದೆ.
ನಿನ್ನೆ ಕೇರಳ ಸರ್ಕಾರದ 2026–27 ನೇ ಸಾಲಿನ ಬಜೆಟ್ ಅನ್ನು ವಿಧಾನಸಭೆಯಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಮಂಡಿಸಿದರು.
ಸಿಪಿಐಎಂ ನೇತೃತ್ವದ ಸಿಎಂ ಪಿಣರಾಯಿ ವಿಜಯನ್ ಅವರ ಸರ್ಕಾರದ ಕೊನೆಯ ಬಜೆಟ್ ಇದು. ಮುಂಬರುವ ಮೇನಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಕೇರಳದಲ್ಲಿ ಹಿರಿಯ ನಾಗರಿಕರ ಸಂಖ್ಯೆ (60 ವರ್ಷ ಮೇಲ್ಪಟ್ಟವರು) ಗಮನಾರ್ಹವಾಗಿ ಹೆಚ್ಚುತ್ತಿರುವುದರಿಂದ ಕೇರಳ ಸರ್ಕಾರ ತನ್ನ ರಾಜ್ಯದಲ್ಲಿನ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದೆ. ಈ ಬಜೆಟ್ ಪ್ರಕಾರ, ರಾಜ್ಯದಲ್ಲಿ ಹಿರಿಯ ನಾಗರಿಕರಿಗೆ ಅತ್ಯವಶ್ಯಕವಾದ ಗಮನವನ್ನು ನೀಡಬೇಕಾದ ಸಮಯ ಬಂದಿದೆ ಎಂದು ಪ್ರಸ್ತಾಪಿಸಿದೆ.
ಹಿರಿಯ ನಾಗರಿಕರಿಗಾಗಿ ಹಿರಿಯ ನಾಗರಿಕರ ಆಯೋಗ ಸ್ಥಾಪಿಸುವುದು, ಅದಕ್ಕಾಗಿ ವಾರ್ಷಿಕವಾಗಿ ₹30 ಕೋಟಿ ಮೀಸಲಿಡುವುದು. ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸ್ವಯಂ ಸೇವಕ ಪಡೆಗಳನ್ನು ಸ್ಥಾಪಿಸಿ ಅವರ ಮೂಲಕ 24X7 ಸಹಾಯ ಸೌಲಭ್ಯ ಕಲ್ಪಿಸುವುದು, ಡಿಜಿಟಲ್ ಪೋರ್ಟಲ್ ಸ್ಥಾಪಿಸಿ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಕಲ್ಯಾಣ ಯೋಜನೆ, ಕುಂದುಕೊರತೆಗಳ ಬಗ್ಗೆ ಸೇವೆ ನೀಡುವುದು, ವೈದ್ಯಕೀಯ ನೆರವು, ಕಾನೂನು ಸೇವೆ, ಸುರಕ್ಷತೆ ಬಗ್ಗೆ ನಿಗಾ ಇಡಲಾಗುತ್ತದೆ ಎಂದು ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.
ಹಿರಿಯ ನಾಗರಿಕರ ಸಹಾಯಕ್ಕೆ ಸ್ಥಾಪಿಸುವ ಸ್ವಯಂಸೇವಾ ಪಡೆಗಳಿಗೆ ಸುಮಾರು ₹10 ಕೋಟಿ ಮೀಸಲಿಡಲಿದ್ದೇವೆ ಎಂದು ತಿಳಿಸಿದರು.
ಕೇರಳದ ಒಟ್ಟು ಜನಸಂಖ್ಯೆಯಲ್ಲಿ (ಅಂದಾಜು 3.5 ಕೋಟಿ) ಶೇ 18.7 ರಷ್ಟು ಹಿರಿಯ ನಾಗರಿಕರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಆರ್ಥಿಕತೆಯ ದೃಷ್ಟಿಯಿಂದಲೂ ನಮಗೆ ಹಿರಿಯ ನಾಗರಿಕರು ತುಂಬಾ ಮಹತ್ವಪೂರ್ಣ. ಹಿರಿಯ ನಾಗರಿಕರನ್ನು ಗಮನದಲ್ಲಿರಿಸಿಕೊಂಡು ಪ್ರತ್ಯೇಕವಾಗಿ ಬಜೆಟ್ ಮಂಡಿಸುವುದೂ ಸಹ ಆ ಕ್ಷೇತ್ರದಲ್ಲಿನ ಆರ್ಥಿಕ ಚಟುವಟಿಕೆಗಳ ವೇಗಕ್ಕೆ ಪುಷ್ಠಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಕೇರಳ ರಾಜ್ಯದ ಯುವ ಜನತೆಯ ಪ್ರಮಾಣಕ್ಕೆ ಹೋಲಿಸಿದರೆ ಹಿರಿಯ ನಾಗರಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಶೀಘ್ರದಲ್ಲಿಯೇ ಇವರ ಪ್ರಮಾಣ ಶೇ 25 ಅನ್ನೂ ಮೀರಿಸಲಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಕೇರಳ ಅತಿ ಹೆಚ್ಚು ಹಿರಿಯ ನಾಗರಿಕರನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.