ತಿರುವನಂತಪುರ: ಲಿಂಗತ್ವ ಅಲ್ಪಸಂಖ್ಯಾತ ದಂಪತಿಯು ಮಗುವಿನ ಜನನ ಪ್ರಮಾಣಪತ್ರದಲ್ಲಿ ತಮ್ಮನ್ನು ‘ತಂದೆ’ ಮತ್ತು ‘ತಾಯಿ’ ಎಂದು ನಮೂದಿಸುವ ಬದಲು ‘ಪೋಷಕರು’ ಎಂದು ನಮೂದಿಸಬಹುದು ಎಂದು ಕೇರಳ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ತೀರ್ಪು ಬಂದಿದ್ದು, 2023ರ ಫೆಬ್ರುವರಿಯಲ್ಲಿ ಮಗುವಿಗೆ ಜನ್ಮ ನೀಡಿದ ಕೇರಳದ 25 ವರ್ಷದ ಜಹಾದ್ ಮತ್ತು 24 ವರ್ಷದ ಜಿಯಾ ದಂಪತಿಗೆ ಸಮಾಧಾನ ತಂದಿದೆ.
ಕೋಯಿಕ್ಕೋಡ್ ನಗರ ಪಾಲಿಕೆಯು ನೀಡಿದ ಜನನ ಪ್ರಮಾಣಪತ್ರದಲ್ಲಿ ಮಗುವಿಗೆ ಜನ್ಮ ನೀಡಿದ ಜಹಾದ್ ಅವರನ್ನು ತಾಯಿ ಎಂದೂ, ಆಕೆಯ ಸಂಗಾತಿ ಜಿಯಾ ಅವರನ್ನು ತಂದೆ ಎಂದು ಉಲ್ಲೇಖಿಸಲಾಗಿತ್ತು. ತಾವಿಬ್ಬರೂ ಲಿಂಗತ್ವ ಅಲ್ಪಸಂಖ್ಯಾತ ಆಗಿರುವುದರಿಂದ ತಮ್ಮನ್ನು ‘ಪೋಷಕರು’ ಎಂದು ಉಲ್ಲೇಖಿಸುವಂತೆ ಕೋರಿದ್ದರು.
ಕೇರಳದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೊದಲ ವಕೀಲೆಯಾಗಿರುವ ಪದ್ಮ ಲಕ್ಷ್ಮೀ ಅವರು ಕೇರಳ ಹೈಕೋರ್ಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ದಂಪತಿಯ ಪರ ವಾದ ಮಂಡಿಸಿದರು.
ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಅವರ ಪೀಠವು ದಂಪತಿಯ ಅರ್ಜಿಯನ್ನು ಅಂಗೀಕರಿಸಿ, ಇಬ್ಬರನ್ನೂ ‘ಪೋಷಕರು’ ಎಂದು ಉಲ್ಲೇಖಿಸುವ ಜನನ ಪ್ರಮಾಣಪತ್ರವನ್ನು ನೀಡುವಂತೆ ಕೋಯಿಕ್ಕೋಡ್ ನಗರಪಾಲಿಕೆಗೆ ನಿರ್ದೇಶಿಸಿತು.
ಜಹಾದ್ ಅವರು ಕೋಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 2023ರ ಫೆ.8ರಂದು ಮಗುವಿಗೆ ಜನ್ಮ ನೀಡಿದ್ದರು. ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಮಗುವಿಗೆ ಜನ್ಮ ನೀಡಿದ ಮೊದಲ ಮೊದಲ ಪ್ರಕರಣ ಇದು ಎನ್ನಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.