ADVERTISEMENT

ವಯನಾಡ್‌: ಮಹಿಳೆ ಕೊಂದಿದ್ದ ಹುಲಿ ಕಳೇಬರ ಪತ್ತೆ

ಪಿಟಿಐ
Published 27 ಜನವರಿ 2025, 6:19 IST
Last Updated 27 ಜನವರಿ 2025, 6:19 IST
   

ತಿರುವನಂತಪುರ: ಇತ್ತೀಚೆಗೆ ವಯನಾಡ್‌ನಲ್ಲಿನ ಕಾಫಿ ತೋಟವೊಂದರ ಕಾರ್ಮಿಕ ಮಹಿಳೆ ರಾಧಾ ಅವರನ್ನು ಬಲಿ ತೆಗೆದುಕೊಂಡಿದ್ದ ಹುಲಿಯ ಕಳೇಬರ ಸೋಮವಾರ ಬೆಳಗಿನ ಜಾವ ವಯನಾಡ್‌ನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

‘ರಾತ್ರಿ 12.30ರ ಸುಮಾರಿಗೆ ಹುಲಿಯು ಈ ಭಾಗದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು. 2.30ರ ಸುಮಾರಿಗೆ ಹುಲಿ ಕಾಣಿಸಿಕೊಂಡಿತು. ಹುಲಿಯನ್ನು ಶಾಂತಗೊಳಿಸುವ ನಮ್ಮ ಯತ್ನ ಫಲ ನೀಡಲಿಲ್ಲ. ಬಳಿಕ ಬೆಳಗಿನ ಜಾವ ಹುಲಿಯ ಕಳೇಬರ ಪತ್ತೆಯಾಯಿತು. ಕಳೇಬರದಲ್ಲಿ ಗಾಯಗಳು ಕಂಡುಬಂದಿವೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ದೀಪಾ ಮಾಹಿತಿ ನೀಡಿದರು.

‘ಕಳೇಬರದ ‍ಪರೀಕ್ಷೆಯ ವೇಳೆ ಹುಲಿಯ ಹೊಟ್ಟೆಯಲ್ಲಿ ರಾಧಾ ಅವರ ಕೂದಲು, ಬಟ್ಟೆಯ ತುಂಡು ಹಾಗೂ ಕಿವಿ ಓಲೆಗಳು ಕಂಡುಬಂದವು. ಅರಣ್ಯ ಪ್ರದೇಶದಲ್ಲಿ ಮತ್ತೊಂದು ಹುಲಿಯೊಂದಿಗೆ ಗಲಾಟೆಯಾಗಿರುವುದೇ ಈ ಹುಲಿಯ ಸಾವಿಗೆ ಕಾರಣ ಇರಬಹುದು’ ಎಂದು ಅಧಿಕಾರಿಗಳು ಹೇಳಿದರು.

ADVERTISEMENT

ಮೃತ ಹುಲಿಯ ಮಾಹಿತಿಯು ಕೇರಳ ಅರಣ್ಯ ಅಧಿಕಾರಿಗಳ ಬಳಿ ಇರಲಿಲ್ಲ. ಆದ್ದರಿಂದ, ಇದು ಕೇರಳ ಭಾಗದ ಹುಲಿಯಾಗಿರಲಿಲ್ಲ. ಕರ್ನಾಟಕ ಅರಣ್ಯ ಪ್ರದೇಶಗಳಿಂದ ಇಲ್ಲಿಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯ ಸಾವಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.