ADVERTISEMENT

ಭಾರತ–ಪಾಕ್ ಕದನ ವಿರಾಮ ಕುರಿತು ಟ್ರಂಪ್‌ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ: ಖರ್ಗೆ

ಪಿಟಿಐ
Published 21 ಜುಲೈ 2025, 15:57 IST
Last Updated 21 ಜುಲೈ 2025, 15:57 IST
<div class="paragraphs"><p>ಸಂಸತ್ತಿನ ಕಾಂಗ್ರೆಸ್‌ ಸಂಸದೀಯ ಪಕ್ಷದ ಕಚೇರಿಯಲ್ಲಿ ಸೋಮವಾರ&nbsp;ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬ ಆಚರಿಸಲಾಯಿತು. ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಇತರ ಸಂಸದರು ಪಾಲ್ಗೊಂಡರು</p></div>

ಸಂಸತ್ತಿನ ಕಾಂಗ್ರೆಸ್‌ ಸಂಸದೀಯ ಪಕ್ಷದ ಕಚೇರಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬ ಆಚರಿಸಲಾಯಿತು. ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಇತರ ಸಂಸದರು ಪಾಲ್ಗೊಂಡರು

   

–ಪಿಟಿಐ ಚಿತ್ರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ತಾವು ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಮಾಡಿದ ‘ಅವಮಾನ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ADVERTISEMENT

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಟ್ರಂಪ್ ನೀಡಿರುವ ಕದನ ವಿರಾಮದ ಹೇಳಿಕೆಗಳ ಬಗ್ಗೆ ತಾವು ಎತ್ತಿರುವ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಖರ್ಗೆ ಮತ್ತು ಕಾಂಗ್ರೆಸ್‌ ಪಕ್ಷದ ಇತರ ಸದಸ್ಯರು ಸೋಮವಾರ ಒತ್ತಾಯಿಸಿದರು.

ಮುಂಗಾರು ಅಧಿವೇಶನದ ಮೊದಲ ದಿನ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು, ತಾವು ಮುಂದಿಟ್ಟಿರುವ ವಿಷಯಗಳ ಬಗ್ಗೆ ತಕ್ಷಣ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು. 

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಆಪರೇಷನ್‌ ಸಿಂಧೂರ ಕುರಿತು ಚರ್ಚೆ ಕೈಗೆತ್ತಿಕೊಳ್ಳಲು ಖರ್ಗೆ ಹಾಗೂ ವಿರೋಧ ಪಕ್ಷಗಳ ಹಲವು ಸದಸ್ಯರು ನಿಯಮ 267ರ ಅಡಿಯಲ್ಲಿ ನೋಟಿಸ್‌ ಸಲ್ಲಿಸಿದ್ದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಖರ್ಗೆ, ವಿರೋಧ ಪಕ್ಷಗಳು ಎತ್ತಿರುವ ಪ್ರಮುಖ ವಿಷಯಗಳ ಬಗ್ಗೆ ಎರಡು ದಿನಗಳ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. 

ಪಹಲ್ಗಾಮ್‌ ದಾಳಿ ಏಪ್ರಿಲ್‌ 22ರಂದು ನಡೆದಿತ್ತು ಎಂಬುದನ್ನು ನೆನಪಿಸಿದ ಅವರು, ದಾಳಿ ನಡೆಸಿದ ಉಗ್ರರನ್ನು ಇದುವರೆಗೂ ಬಂಧಿಸಲು ಅಥವಾ ಹತ್ಯೆ ಮಾಡಲು ಸಾಧ್ಯವಾಗಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

‘ಟ್ರಂಪ್ ಅವರ ಹೇಳಿಕೆಯ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಏಕೆಂದರೆ ಟ್ರಂಪ್‌ ಅವರು ಕದನ ವಿರಾಮವನ್ನು ನಾವೇ ಮಾಡಿದ್ದೇವೆ ಎಂದು 24 ಬಾರಿ ಹೇಳಿಕೊಂಡಿದ್ದಾರೆ. ಇದು ದೇಶಕ್ಕೆ ಮಾಡಿರುವ ಅವಮಾನ’ ಎಂದರು. 

ಖರ್ಗೆ ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಸದನದ ನಾಯಕ ಜೆ.ಪಿ ನಡ್ಡಾ, ‘ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸರ್ಕಾರ ಸಿದ್ಧ’ ಎಂದು ಭರವಸೆ ನೀಡಿದರು. 

ಈ ವಿಷಯಗಳ ಕುರಿತು ಪೂರ್ಣ ಪ್ರಮಾಣದ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ಜಗದೀಪ್‌ ಧನಕರ್ ಅವರು ವಿರೋಧ ಪಕ್ಷಗಳ ಸದಸ್ಯರಿಗೆ ಭರವಸೆ ನೀಡಿದರು.

ಆದರೆ, ಮಧ್ಯಾಹ್ನ 12ಕ್ಕೆ ಕಲಾಪ ಮತ್ತೆ ಆರಂಭವಾದಾಗಲೂ ಚರ್ಚೆಗೆ ಪಟ್ಟುಹಿಡಿದ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ದ್ವೇಷ ಸಹಿಸಲಾಗದು: ಧನಕರ್‌

‘ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವವು ನಿರಂತರವಾಗಿ ರಾಜಕೀಯ ದ್ವೇಷವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್‌ ಹೇಳಿದರು. ಸಂಘರ್ಷವಿಲ್ಲದ ಸಂವಾದ ಮತ್ತು ಚರ್ಚೆಯೇ ನಮ್ಮ ಮುಂದಿರುವ ದಾರಿ ಎಂದು ಹೇಳಿದ ಅವರು ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ರಚನಾತ್ಮಕ ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಮಾತನಾಡಿದ ಅವರು ಎಲ್ಲ ಪಕ್ಷಗಳು ಸಾರ್ವಜನಿಕವಾಗಿ ಪರಸ್ಪರ ವೈಯಕ್ತಿಕ ದಾಳಿಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.

ಆಂತರಿಕ ಕಚ್ಚಾಟವು ನಮ್ಮ ಶತ್ರುಗಳಿಗೆ ಇನ್ನಷ್ಟು ಬಲ ನೀಡುತ್ತದೆ ಮತ್ತು ನಮ್ಮನ್ನು ವಿಭಜಿಸಲು ಅವರಿಗೆ ನೆರವಾಗುತ್ತದೆ
-ಜಗದೀಪ್‌ ಧನಕರ್, ರಾಜ್ಯಸಭಾ ಸಭಾಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.