ADVERTISEMENT

ಗುಜರಾತ್‌ ಚುನಾವಣೆ: ಖರ್ಗೆ, ಸೋನಿಯಾ, ರಾಹುಲ್‌ ಸೇರಿ 40 ತಾರಾ ಪ್ರಚಾರಕರು

ಪಿಟಿಐ
Published 15 ನವೆಂಬರ್ 2022, 16:23 IST
Last Updated 15 ನವೆಂಬರ್ 2022, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ 40 ಗಣ್ಯರ ಹೆಸರನ್ನು ಗುಜರಾತ್‌ ಚುನಾವಣಾ ತಾರಾ ಪ್ರಚಾರಕರಾಗಿ ಕಾಂಗ್ರೆಸ್‌ ಘೋಷಿಸಿದೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೂ ತಾರಾ ಪ್ರಚಾರಕರಾಗಿದ್ದಾರೆ. ಗುಜರಾತ್‌ ವಿಧಾನಸಭೆಗೆ ಡಿಸೆಂಬರ್‌ 1 ಮತ್ತು 5ರಂದು ಚುನಾವಣೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ ಬಿಜೆಪಿ 27 ವರ್ಷಗಳಿಂದ ಅಧಿಕಾರಲ್ಲಿದೆ. 2017ರ ಚುನಾವಣೆಯಲ್ಲಿ ಉತ್ತಮ ಸ್ಪರ್ಧೆ ನೀಡಿದ್ದ ಕಾಂಗ್ರೆಸ್‌, ಗುಜರಾತಿನಲ್ಲಿ ಅಧಿಕಾರಕ್ಕೆ ಬರಲು ಕಸರತ್ತು ನಡೆಸುತ್ತಿದೆ.

ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಕೇರಳದ ಸಿಎಲ್‌ಪಿ ನಾಯಕ ರಮೇಶ್‌ ಚನ್ನಿತಲ, ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ ಸಿಂಗ್‌, ಕಮಲ್‌ನಾಥ್‌, ಭೂಪಿಂದರ್ ಸಿಂಗ್ ಹೂಡಾ, ಅಶೋಕ್‌ ಚವಾಣ್‌, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌, ಜಿಗ್ನೇಶ್‌ ಮೆವಾನಿ, ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರು ತಾರಾ ಪ್ರಚಾರಕರ ಪ್ಟಟಿಯಲ್ಲಿದ್ದಾರೆ.

ತಾರಾ ಪ್ರಚಾರಕರ ಖರ್ಚು ವೆಚ್ಚಗಳು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಭಾಗವಾಗಿರುವುದಿಲ್ಲ. ಬದಲಿಗೆ ಚುನಾವಣಾ ಕಾನೂನಿನ ಪ್ರಕಾರ ಆ ಖರ್ಚು ವೆಚ್ಚಗಳನ್ನು ಆಯಾ ಪಕ್ಷಗಳು ಭರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.