ADVERTISEMENT

ಭವಿಷ್ಯದ ಚುನಾವಣಾ ಫಲಿತಾಂಶಗಳಿಗೆ ಉನ್ನತ ನಾಯಕರೇ ಹೊಣೆ: ಖರ್ಗೆ

ಪಿಟಿಐ
Published 19 ಫೆಬ್ರುವರಿ 2025, 9:49 IST
Last Updated 19 ಫೆಬ್ರುವರಿ 2025, 9:49 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಭವಿಷ್ಯದಲ್ಲಿ ಚುನಾವಣಾ ಫಲಿತಾಂಶಗಳಿಗೆ ಪಕ್ಷದ ಉನ್ನತ ನಾಯಕರನ್ನು ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚ್ಚರಿಕೆ ನೀಡಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಪ್ರಸ್ತಾಪಿಸಿರುವ ಅವರು, ಪಕ್ಷಾಂತರ ಮಾಡಿ, ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವವರ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದೂ ಸೂಚಿಸಿದ್ದಾರೆ.

ಪಕ್ಷದ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಹೊಸ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಮೂಲದಿಂದ ಕಟ್ಟಲು ಮತ್ತು ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕೆಲಸ ಮಾಡುವಂತೆ ಪಕ್ಷದ ನಾಯಕರಿಗೆ ಒತ್ತಾಯಿಸಿದರು. ಸೈದ್ಧಾಂತಿಕವಾಗಿ ಪಕ್ಷಕ್ಕೆ ಬದ್ಧವಾಗಿರುವಂತಹವರನ್ನು ಉತ್ತೇಜಿಸಿ ಎಂದರು.

ADVERTISEMENT

ಪಕ್ಷದ ಸಂಘಟನೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಇನ್ನಷ್ಟು ಬದಲಾವಣೆಗಳನ್ನು ತರಲಾಗುವುದು ಎಂದು ಹೇಳಿದರು.

'ಚುನಾವಣಾ ಫಲಿತಾಂಶಗಳ ಜವಾಬ್ದಾರಿಯ ಕುರಿತಾದ ಪ್ರಮುಖ ವಿಷಯದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ. ರಾಜ್ಯಗಳಲ್ಲಿನ ಸಂಘಟನೆಗೆ ಪುನಶ್ಚೇತನ ನೀಡಲು ಮುಂದಿನ ಎಲ್ಲ ಚುನಾವಣಾ ಫಲಿತಾಂಶಗಳಿಗೆ ನಿಮ್ಮೆಲ್ಲರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಪದಾಧಿಕಾರಿಗಳಿಗೆ ಹೇಳಿದರು.

ಪಕ್ಷವು ಸಂಘಟನೆಯಲ್ಲಿ ಇತ್ತೀಚೆಗೆ ಮಾಡಿದ ಕೆಲ ಬದಲಾವಣೆಗಳಲ್ಲಿ ಹೊಸ ಪದಾಧಿಕಾರಿಗಳನ್ನು ಕರೆತಂದಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಲ್ಲ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ರಾಜ್ಯಗಳ ಉಸ್ತುವಾರಿಗಳು ಇದ್ದರು.

ಬೂತ್‌ನಿಂದ ಕೇಂದ್ರ ಕಚೇರಿವರೆಗೆ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಕಷ್ಟಕಾಲದಲ್ಲಿ ಪಕ್ಷದ ಬೆನ್ನಿಗೆ ಬಂಡೆಯಂತೆ ನಿಲ್ಲುವ ಸೈದ್ಧಾಂತಿಕ ಬದ್ಧತೆ ಇರುವವರನ್ನು ಕರೆತರಬೇಕು ಎಂದು ಖರ್ಗೆ ಹೇಳಿದರು.

‘ಕೆಲವೊಮ್ಮೆ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುವಾಗ, ತರಾತುರಿಯಲ್ಲಿ ಕೆಲವರನ್ನು ಕರೆತಂದಾಗ ಕಷ್ಟದ ಸಮಯದಲ್ಲಿ ಅವರು ಓಡಿಹೋಗುತ್ತಾರೆ. ಅಂತಹವರಿಂದ ನಾವು ದೂರವಿರಬೇಕು,’ ಎಂದು ಪಕ್ಷದ ಮುಖಂಡರಿಗೆ ತಿಳಿಹೇಳಿದರು.

ಖರ್ಗೆ ಮಾತಿನ ಪ್ರಮುಖಾಂಶಗಳು

* ದೆಹಲಿ ಮತದಾರರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಪಕ್ಷವು ಉತ್ತಮ ಸಾಧನೆ ಮಾಡಿದೆ. ಪಕ್ಷದ ರಾಜ್ಯ ಘಟಕದ ನಾಯಕತ್ವದ ಪ್ರಯತ್ನ ಶ್ಲಾಘನೀಯ

* ಮುಂದಿನ ಐದು ವರ್ಷ ದೆಹಲಿಯ ಜನರ ಹಿತಾಸಕ್ತಿ ಒಳಗೊಂಡ ವಿಚಾರಗಳನ್ನು ಮುಂದಿಟ್ಟುಕೊಂಡು ಪಕ್ಷದ ನಾಯಕರು ಹೋರಾಟ ನಡೆಸುವ ಮೂಲಕ ಪಕ್ಷವು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಲು ಶ್ರಮಿಸಬೇಕು. 

  * ನಾಯಕರು ಬೂತ್‌ಗಳಿಗೆ ತೆರಳಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಬೇಕು. ಪಕ್ಷದ ವಿವಿಧ ಘಟಕಗಳನ್ನು ತೊಡಗಿಸಿಕೊಳ್ಳಬೇಕು. ವಿಶೇಷವಾಗಿ ಪಕ್ಷ ಸಂಘಟನೆಯಲ್ಲಿ ಇಂಟಕ್ ಅನ್ನು ತೊಡಗಿಸಿಕೊಳ್ಳಬೇಕು

* ‘ಸಂವಿಧಾನ ಉಳಿಸಿ ಅಭಿಯಾಣ’ ಮುಂದಿನ ವರ್ಷದ ವರೆಗೆ ಮುಂದುವರಿಯಲಿದೆ. ಈ ಅಭಿಯಾನದ ಭಾಗವಾಗಿ ಪಾದಯಾತ್ರೆ ಸಂವಾದ ಬೀದಿ ಬದಿ ಸಭೆಗಳನ್ನು ನಡೆಸಬೇಕು. ಇಂತಹ ಪ್ರತಿ ಕಾರ್ಯಕ್ರಮದ ಗುರಿ ಸಂಘಟನೆ ಬಲಪಡಿಸುವುದೇ ಆಗಿರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.