ADVERTISEMENT

ಸಂಸತ್‌ ಮುಂಗಾರು ಅಧಿವೇಶನ: ಕೋವಿಡ್‌ ನಿರ್ವಹಣೆಯ ಚರ್ಚೆಗೆ ಕಾಂಗ್ರೆಸ್‌ ಒಲವು

ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಲು ವಿಪಕ್ಷಗಳು ಸಜ್ಜು

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 10:15 IST
Last Updated 18 ಜುಲೈ 2021, 10:15 IST
ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗುವ ಹಿನ್ನೆಲೆಯಲ್ಲಿ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ನವದೆಹಲಿಯಲ್ಲಿ ಭಾನುವಾರ ವಿವಿಧ ಪಕ್ಷಗಳ ನಾಯಕರ ಸಭೆ ನಡೆಸಿದರು –ಪಿಟಿಐ ಚಿತ್ರ
ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗುವ ಹಿನ್ನೆಲೆಯಲ್ಲಿ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ನವದೆಹಲಿಯಲ್ಲಿ ಭಾನುವಾರ ವಿವಿಧ ಪಕ್ಷಗಳ ನಾಯಕರ ಸಭೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಜುಲೈ 19 ರಿಂದ ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ರಾಜ್ಯಸಭೆಯಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಮುಂದಾಗಿವೆ.

ದೇಶದಲ್ಲಿ ಕೋವಿಡ್‌–19 ಪಿಡುಗಿನ ನಿರ್ವಹಣೆ, ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕೈಗೊಂಡಿರುವ ಪ್ರತಿಭಟನೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿ, ಸರ್ಕಾರಕ್ಕೆ ಚಾಟಿ ಬೀಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಇನ್ನೊಂದೆಡೆ, ಅಮೆರಿಕ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡ ನಂತರ ಅಫ್ಗಾನಿಸ್ತಾನದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಪ್ರಸ್ತಾಪಿಸಲು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ನಿರ್ಧರಿಸಿದೆ.

ADVERTISEMENT

'ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯಲ್ಲಿನ ವಿವಿಧ ಪಕ್ಷಗಳ ಸಭಾನಾಯಕರ ಸಭೆಯನ್ನು ಶನಿವಾರ ಕರೆದಿದ್ದರು. ಅಧಿವೇಶನದಲ್ಲಿ ವಿವಿಧ ವಿಷಯಗಳ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ವಿರೋಧ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಮಂಡಿಸಿದರು' ಎಂದು ಮೂಲಗಳು ಹೇಳಿವೆ.

‘ಕೋವಿಡ್‌–19 ಪಿಡುಗಿನ ನಿರ್ವಹಣೆ, ದೇಶದ ಆರ್ಥಿಕತೆ, ಉದ್ಯೋಗಾವಕಾಶಗಳು, ಬಡತನದ ಮೇಲೆ ಈ ಪಿಡುಗಿನ ಪರಿಣಾಮ ಕುರಿತು ಚರ್ಚೆ ನಡೆಸಬೇಕು ಎಂಬ ಬೇಡಿಕೆಯನ್ನು ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮಂಡಿಸಿದರು.

ಕೋವಿಡ್‌ನ ಮೂರನೇ ಅಲೆಗೆ ಯಾವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆಯೂ ಚರ್ಚೆ ಅಗತ್ಯ. ಅಲ್ಲದೇ, ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ಮುಂದುವರಿಸಿರುವುದು, ಒಕ್ಕೂಟ ವ್ಯವಸ್ಥೆ, ಭಾರತ–ಚೀನಾ ಗಡಿ ಬಿಕ್ಕಟ್ಟು, ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡುವಂತೆ ಖರ್ಗೆ ಬೇಡಿಕೆ ಮಂಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಬೆಳವಣಿಗೆಯಿಂದಾಗುವ ಪರಿಣಾಮಗಳ ಕುರಿತು ಚರ್ಚೆ ಅಗತ್ಯ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮಂಡಿಸಲಿರುವ ವಿವಿಧ ಮಸೂದೆಗಳನ್ನು ಸಂಸದೀಯ ಸಮಿತಿಗಳ ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂಬ ಬೇಡಿಕೆಯನ್ನು ಟಿಎಂಸಿ ಸಂಸದ ಡೆರೆಕ್‌ ಓಬ್ರಿಯಾನ್‌ ಮುಂದಿಟ್ಟಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ರಾಜ್ಯಗಳಿಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳ ಕುರಿತು ಚರ್ಚೆಗೆ ಹೆಚ್ಚು ಕಾಲಾವಕಾಶ ನೀಡಬೇಕು. ಅಲ್ಲದೇ, ಪ್ರಾದೇಶಿಕ ಹಾಗೂ ಸಣ್ಣ ರಾಜಕೀಯ ಪಕ್ಷಗಳಿಗೆ ಹೆಚ್ಚು ಸಮಯ ನೀಡಬೇಕು ಎಂಬ ಬೇಡಿಕೆಗಳನ್ನೂ ಸಲ್ಲಿಸಲಾಗಿದೆ ಎಂದು ಇವೇ ಮೂಲಗಳು ಹೇಳಿವೆ.

ಚರ್ಚೆ, ವಿಷಯ ಮಂಡನೆಗೆ ಪ್ರಾದೇಶಿಕ ಹಾಗೂ ಸಣ್ಣ ಪಕ್ಷಗಳಿಗೆ ಹೆಚ್ಚು ಸಮಯ ಹಂಚಿಕೆ ಮಾಡುವುದಾಗಿ ಸಭಾಪತಿ ವೆಂಕಯ್ಯ ನಾಯ್ಡು ಅವರು ಭರವಸೆ ನೀಡಿದ್ದಾಗಿ ಮೂಲಗಳು ಹೇಳಿವೆ.

ಇದೇ ವೇಳೆ, ಕೋವಿಡ್‌ನಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥ ಸಂದಿಗ್ಧ ಕಾಲದಲ್ಲಿ ಎಲ್ಲ ಸಂಸದರು ಅವರ ನೆರವಿಗೆ ನಿಲ್ಲಬೇಕು. ಸಂಸತ್‌ನಲ್ಲಿ ಅವರ ಧ್ವನಿಯಾಗಬೇಕು ಎಂದು ನಾಯ್ಡು ಅವರು ಎಲ್ಲ ಸಂಸದರಿಗೆ ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಸದನನಾಯಕರಾದ ಸಚಿವ ಪೀಯೂಷ್‌ ಗೋಯಲ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಾಕ್ಸ್‌....

29 ಮಸೂದೆಗಳ ಮಂಡನೆ: ಜೋಶಿ

‘ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಗಾಗಿ 29 ಮಸೂದೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಿರೋಧ ಪಕ್ಷಗಳ ಮುಖಂಡರಿಗೆ ತಿಳಿಸಿದರು.

‘ಈ ಪೈಕಿ 6 ಸುಗ್ರೀವಾಜ್ಞೆಗಳ ಬದಲಿಗೆ ಬೇರೆ ಸುಗ್ರೀವಾಜ್ಞೆ ಮಂಡನೆಗೆ ಸಂಬಂಧಿಸಿದ ಮಸೂದೆಗಳು, ಅಧಿವೇಶನದ ವೆಚ್ಚಕ್ಕೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸಲಾಗುತ್ತದೆ’ ಎಂದೂ ಅವರ ವಿರೋಧ ಪಕ್ಷಗಳ ಮುಖಂಡರ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.