ADVERTISEMENT

ಖರ್ಗೋನ್‌ ಹಿಂಸಾಚಾರ: ಗಲಭೆಕೋರರಿಂದ ನಷ್ಟ ಪರಿಹಾರ ವಸೂಲಾತಿಗೆ ನ್ಯಾಯಮಂಡಳಿ ರಚನೆ

ಮಧ್ಯ ಪ್ರದೇಶ

ಪಿಟಿಐ
Published 13 ಏಪ್ರಿಲ್ 2022, 13:26 IST
Last Updated 13 ಏಪ್ರಿಲ್ 2022, 13:26 IST
ಮಧ್ಯ ಪ್ರದೇಶದ ಖರ್ಗೋನ್‌ ನಗರದಲ್ಲಿ ನಡೆದಿದ್ದ ಹಿಂಸಾಚಾರ–ಸಂಗ್ರಹ ಚಿತ್ರ
ಮಧ್ಯ ಪ್ರದೇಶದ ಖರ್ಗೋನ್‌ ನಗರದಲ್ಲಿ ನಡೆದಿದ್ದ ಹಿಂಸಾಚಾರ–ಸಂಗ್ರಹ ಚಿತ್ರ   

ಭೋಪಾಲ್‌: ಖರ್ಗೋನ್‌ ನಗರದಲ್ಲಿ ರಾಮ ನವಮಿ ಸಂಭ್ರಮಾಚರಣೆಯ ವೇಳೆ ಮತೀಯ ಹಿಂಸಾಚಾರ ನಡೆದಿತ್ತು. ಆ ಘಟನೆಯಿಂದಾಗಿ ಆಗಿರುವ ಹಾನಿಗಳಿಗೆ ಪರಿಹಾರ ವಸೂಲಿ ಮಾಡಲು ಮಧ್ಯ ಪ್ರದೇಶ ಸರ್ಕಾರವು ಇಬ್ಬರು ಸದಸ್ಯರನ್ನು ಒಳಗೊಂಡ ನಷ್ಟ ಪರಿಹಾರ ವಸೂಲಾತಿ ನ್ಯಾಯಮಂಡಳಿಯನ್ನು ರಚಿಸಿದೆ.

ನ್ಯಾಯಮಂಡಳಿ ರಚಿಸಿರುವ ಸಂಬಂಧ ಮಂಗಳವಾರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಸೂಚನೆಯ ಪ್ರಕಾರ, 'ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಷ್ಟ ವಸೂಲಾತಿ ಕಾಯ್ದೆ–2021ರ' ಅನ್ವಯ ನ್ಯಾಯಮಂಡಳಿ ರಚಿಸಲಾಗಿದೆ. ಭಾನುವಾರ ಖರ್ಗೋನ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಆಗಿರುವ ಆಸ್ತಿ ನಷ್ಟಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಈ ನ್ಯಾಯಮಂಡಳಿಯು ನಡೆಸಲಿದೆ.

ADVERTISEMENT

ಜಿಲ್ಲಾ ನಿವೃತ್ತ ನ್ಯಾಯಾಧೀಶ ಡಾ.ಶಿವಕುಮಾರ್‌ ಮಿಶ್ರಾ ನೇತೃತ್ವದ ನ್ಯಾಯಮಂಡಳಿಯು ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಪ್ರಭಾತ್‌ ಪರಾಶಾರ್‌ ಅವರನ್ನು ಒಳಗೊಂಡಿದೆ. ಮೂರು ತಿಂಗಳಲ್ಲಿ ನ್ಯಾಯಮಂಡಳಿಯು ನಿಗದಿತ ಕಾರ್ಯ ಪೂರೈಸುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಗಲಭೆಕೋರರಿಂದ ಆಸ್ತಿ ನಷ್ಟದ ಪರಿಹಾರವನ್ನು ವಸೂಲಿ ಮಾಡುವುದನ್ನು ನ್ಯಾಯಮಂಡಳಿಯು ಖಾತ್ರಿ ಪಡಿಸಲಿದೆ. ಭಾನುವಾರ ಖರ್ಗೋನ್‌ನಲ್ಲಿ ರಾಮ ನವಮಿ ಆಚರಣೆಗೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಹಿಂಸಾಚಾರದ ವೇಳೆ ಆಗಿರುವ ನಷ್ಟದ ಬಗ್ಗೆ ತಿಳಿಯಲು ಹಾಗೂ ಗಲಭೆಕೋರರಿಂದ ನಷ್ಟ ಪರಿಹಾರ ವಸೂಲಿ ಮಾಡಲು ನ್ಯಾಯಮಂಡಳಿ ರಚಿಸುವುದಾಗಿ ಹೇಳಿದ್ದರು.

ರಾಮ ನವಮಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿತ್ತು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 100 ಜನರನ್ನು ಬಂಧಿಸಲಾಗಿದೆ ಹಾಗೂ ಖರ್ಗೋನ್‌ನಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.