ADVERTISEMENT

ಈ ರಾಜ್ಯದ ಗ್ರಾಮದಲ್ಲಿ ಮನೆಗಳಿಗೆ ಬೀಗವಿಲ್ಲ.. ಅಂಗಡಿಗಳಲ್ಲಿ ಮಾಲೀಕರೂ ಇರುವುದಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 12:21 IST
Last Updated 19 ಜನವರಿ 2026, 12:21 IST
<div class="paragraphs"><p>ಖೋನೋಮಾ</p></div>

ಖೋನೋಮಾ

   

ಭಾರತದಲ್ಲಿ ಹಚ್ಚ ಹಸುರಿನಿಂದ ಕೂಡಿದ ಹಲವು ಸುಂದರ ತಾಣಗಳಿವೆ. ಅವುಗಳ ಪೈಕಿ ನಾಗಾಲ್ಯಾಂಡ್‌ನ ಖೋನೋಮಾ ಗ್ರಾಮ ಕೂಡ ಒಂದು. ಈ ಸ್ಥಳ ‘ಹಸಿರು ಗ್ರಾಮ’ವೆಂದೆ ಪ್ರಸಿದ್ಧಿ ಪಡೆದಿದೆ. ಈ ಸುಂದರ ಸ್ಥಳವನ್ನು 1998ರಲ್ಲಿ ಖೋನೋಮಾ ಪ್ರಕೃತಿ ಸಂರಕ್ಷಣೆ ಮತ್ತು ಟ್ರಾಗೋಪನ್ ಅಭಯಾರಣ್ಯ ಎಂದು ಘೋಷಿಸಲಾಗಿದೆ. 

ಈ ಗ್ರಾಮದಲ್ಲಿ ಗಲಾಟೆ ಗದ್ದಲಗಳಿಲ್ಲ, ಕಳ್ಳರ ಭಯವಿಲ್ಲ, ಮೋಸ ಮಾಡುವವರು ಇಲ್ಲವೇ ಇಲ್ಲ. ಇಲ್ಲಿನ ಮನೆಗಳು ಹಾಗೂ ಅಂಗಡಿಗಳಿಗೆ ಬೀಗಗಳೂ ಇಲ್ಲ. ಆದರೂ ಇಲ್ಲಿನ ಜನರು ಸಂತೋಷದಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.  ಪ್ರಾಮಾಣಿಕತೆಗೇ ಹೆಸರಾಗಿರುವ ಊರು ಖೋನೋಮಾ.

ADVERTISEMENT

ಮಾಲೀಕರಿಲ್ಲದೆ ಅಂಗಡಿಗಳಲ್ಲಿ ವ್ಯವಹಾರ

ನಾಗಾಲ್ಯಾಂಡ್‌ನ ಈ ಗ್ರಾಮದಲ್ಲಿ ಅಂಗಡಿಯನ್ನು ನೋಡಿಕೊಳ್ಳಲು ಮಾಲೀಕರು ಕೂರಬೇಕೆಂದಿಲ್ಲ. ಹಾಗೆಯೇ ವ್ಯಾಪಾರ ನಡೆಯುತ್ತದೆ. ಕೇಳುವುದಕ್ಕೆ ವಿಚಿತ್ರವೆನಿಸಿದರೂ ಇದು ಸತ್ಯ. ಇಲ್ಲಿನ ಜನರು ಪರಸ್ಪರ ನಂಬಿಕೆ ಮತ್ತು ಗೌರವದಿಂದ ಹೇಗೆ ಬದುಕುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಸಾಮಾನ್ಯವಾಗಿ ರಾತ್ರಿಯಾದರೆ ಅಂಗಡಿಗಳಿಗೆ ಬೀಗವನ್ನು ಹಾಕಲಾಗುತ್ತದೆ. ಆದರೆ ಇಲ್ಲಿ ಆ ಪದ್ಧತಿಯೇ ಇಲ್ಲ. 

ಇಲ್ಲಿನ ಅಂಗಡಿಗಳಲ್ಲಿ ವಸ್ತುವಿನ ಮೇಲೆ ಬೆಲೆಯನ್ನು ಬರೆಯಲಾಗಿರುತ್ತದೆ. ವಸ್ತು ಖರೀದಿಸುವವರು ಆದರ ಮೇಲೆ ನಮೂದಿಸಿರುವ ಬೆಲೆಯ ಹಣವನ್ನು ಅಲ್ಲಿರುವ ಡಬ್ಬಿಗಳಿಗೆ ಹಾಕಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಂಗಡಿ ಮಾಲೀಕರಿಗೆ ಅಲ್ಲಿನ ಜನರು ಮೋಸ ಮಾಡುವುದಿಲ್ಲವೆಂಬ ನಂಬಿಕೆಯೇ ಇದಕ್ಕೆ ಕಾರಣ.

ಅಲ್ಲಿನ ಯಾವೊಂದು ಮನೆಗೂ ರಾತ್ರಿ ಅಥವಾ ಹಗಲಿನಲ್ಲಿ ಬೀಗ ಹಾಕುವುದಿಲ್ಲ. ಇಲ್ಲಿ ಸಮುದಾಯ ಗ್ರಂಥಾಲಯವಿದೆ. ಯಾರು ಬೇಕಾದರು ತಮ್ಮಿಷ್ಟದ ಪುಸ್ತಕ ತೆಗೆದುಕೊಂಡು ಹೋಗಿ ಓದಬಹುದು. ಪುಸ್ತಕವನ್ನು ದಾನ ಮಾಡಲು ಬಯಸುವವರು ಪುಸ್ತಕಗಳನ್ನು ತಂದಿಡಬಹುದು. ತೆಗೆದುಕೊಂಡ ಹೋದ ಪುಸ್ತಕವನ್ನು ಓದಿನ ನಂತರ ತಂದು ಇಡುವುದು ಅಲ್ಲಿನ ನಂಬಿಕೆಗೆ ಉದಾಹರಣೆಯಾಗಿದೆ.

ಬೇಟೆಯಾಡುವುದು ನಿಷೇಧ

ಪುಟ್ಟ ಗ್ರಾಮವಾದ ಖೋನೋಮಾ 20 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಅಂಗಮಿ ಬುಡಕಟ್ಟು ಜನಾಂಗದವರು ಇಲ್ಲಿ ವಾಸಿಸುತ್ತಾರೆ. ಸಾಮಾನ್ಯವಾಗಿ ಬುಡಕಟ್ಟು ಜನಾಂಗದವರ ಪದ್ಧತಿಗಳಲ್ಲಿ ಬೇಟೆಯಾಡುವುದು ಸಹಜವಾಗಿರುತ್ತದೆ. ಆದರೆ 1998ರಲ್ಲಿ ಇಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಅಂದಿನಿಂದ ಇಲ್ಲಿನ ಸಮುದಾಯ ಬೇಟೆಯನ್ನು ನಿಲ್ಲಿಸಿದೆ. 

2011ರ ಜನಗಣತಿಯ ಪ್ರಕಾರ, ಈ ಗ್ರಾಮವು 1,900 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ 424 ಮನೆಗಳಿವೆ. ಸರ್ಕಾರವು ಬೇಟೆಯಾಡುವುದನ್ನು ನಿಷೇಧಿಸಿದ ನಂತರ, ಇಲ್ಲಿನ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡರು. ಈಗ ಅಂಗಮಿ ಹಾಗೂ ನಾಗಾ ಬುಡಕಟ್ಟು ಜನಾಂಗವು ಅರಣ್ಯ ಸಂಪನ್ಮೂಲ, ಕೃಷಿ ಮತ್ತು ಜಾನುವಾರು ಸಾಕಾಣಿಕೆಯ ಮೂಲಕ ಜೀವನ ಸಾಗಿಸುತ್ತಿದ್ದಾರೆ. 

ಖೋನೋಮಾದಲ್ಲಿ ಏನೇನಿದೆ?

ಪುಟ್ಟ ಹಳ್ಳಿಯಾದರೂ ಪ್ರಕೃತಿ ಸೌಂದರ್ಯಕ್ಕೆ ಕೊರತೆ ಇಲ್ಲ. ಅನೇಕ ರಮಣೀಯ ಹಾಗೂ ಸುಂದರ ಪರ್ವತ ಶ್ರೇಣಿಗಳಿವೆ. ಇಲ್ಲಿನ ಭೂದೃಶ್ಯಗಳು ನಿಜಕ್ಕೂ ಅದ್ಭಿತವಾಗಿವೆ. ಮಾರ್ಗದರ್ಶಕರೊಂದಿಗೆ ಪ್ರಕೃತಿ ನಡಿಗೆ ಮತ್ತು ಚಾರಣಗಳನ್ನು ಮಾಡಬಹುದು. 

ಖೋನೋಮಾ ಕೋಟೆ

ಪ್ರಮುಖವಾಗಿ ಇಲ್ಲಿನ ಖೋನೋಮಾ ಕೋಟೆ ಹೆಚ್ಚು ಆಕರ್ಷಣೆಯ ತಾಣವಾಗಿದೆ. ಬ್ರಿಟಿಷರು ಇಲ್ಲಿನ ಜನರನ್ನು ಒತ್ತೆಯಾಳುಗಳಾಗಿ ಮಾಡಿಕೊಳ್ಳುತ್ತಿದ್ದರು. ಇದರ ವಿರುದ್ಧ 19ನೇ ಶತಮಾನದಲ್ಲಿ ಅಂಗಮಿ ಹಾಗೂ ನಾಗಾ ಬುಡಕಟ್ಟು ಜನಾಂಗದವರು ಬ್ರಿಟಿಷರ ವಿರುದ್ಧ ಈ ಸ್ಥಳದಲ್ಲಿ ಹೋರಾಡಿದರು. ಆದರೆ ನಾಗಾಲ್ಯಾಂಡ್‌ನ ಖೋನೋಮಾ ಪ್ರವಾಸಿ ತಾಣವಲ್ಲ, ಆದರೆ ಇಲ್ಲಿನ ಸಮುದಾಯದ ಜನರಲ್ಲಿ ಬೇರೂರಿರುವ ಮೌಲ್ಯ, ಸುಸ್ಥಿರ ಜೀವನ ಮತ್ತು ಸಾಮಾಜಿಕ ಜವಾಬ್ದಾರಿ ಜೀವನದ ಪಾಠಗಳನ್ನು ‌ಕಲಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.