ಕಿರಣ್ ರಿಜಿಜು
– ಪಿಟಿಐ ಚಿತ್ರ
ನವದೆಹಲಿ: 'ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತವನ್ನು ಕೀಳು ಮಟ್ಟದಲ್ಲಿ ಕಾಣಬಾರದು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಲಹೆ ನೀಡಿದ್ದಾರೆ.
ಈ ಸಂಬಂಧ ಉದ್ಯಮಿ ಎಲಾನ್ ಮಸ್ಕ್ ಅವರು ಹಂಚಿಕೊಂಡಿರುವ ಅಂಕಿಅಂಶವನ್ನು ರಿಜಿಜು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
'ನಾನು ಸಾಮಾನ್ಯವಾಗಿ ಭಾರತೀಯರಲ್ಲದ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಸರ್ಕಾರವನ್ನು ಟೀಕೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಭಾರತವನ್ನು ಕೀಳಾಗಿ ಕಾಣಬಾರದು ಮತ್ತು ಎಂದಿಗೂ ದೇಶದ ಸಾಧನೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ರಾಹುಲ್ ಗಾಂಧಿ ಅವರಿಗೆ ತಿಳಿಸುವುದಕ್ಕಾಗಿ ನಾನು ಎಲಾನ್ ಮಸ್ಕ್ ಅವರನ್ನು ಉಲ್ಲೇಖ ಮಾಡುತ್ತಿದ್ದೇನೆ. ಮೊದಲು ಹೆಮ್ಮೆಯ ಭಾರತೀಯರಾಗಿರಿ' ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಜಾಗತಿಕ ನೈಜ ಜಿಡಿಪಿ ಬೆಳವಣಿಗೆಯ ಅಗ್ರ 10 ಕೊಡುಗೆದಾರ ದೇಶಗಳ ಪಟ್ಟಿಯನ್ನು ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅಂಕಿಅಂಶಗಳ ಪ್ರಕಾರ ಅಮೆರಿಕಗಿಂತಲೂ ಪ್ರಗತಿ ಸಾಧಿಸಿರುವ ಭಾರತ, ಚೀನಾ ಬಳಿಕ ಎರಡನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.