ADVERTISEMENT

ಆಕ್ರಮಣಕಾರಿಯಾಗಿ ವರ್ತಿಸಿದ ದಾಳಿಕೋರ ಆಭರಣಗಳನ್ನು ಮುಟ್ಟಿರಲಿಲ್ಲ: ಕರೀನಾ ಕಪೂರ್

ಪಿಟಿಐ
Published 18 ಜನವರಿ 2025, 7:11 IST
Last Updated 18 ಜನವರಿ 2025, 7:11 IST
<div class="paragraphs"><p>ಸೈಫ್‌ ಅಲಿ ಖಾನ್‌, ಕರೀನಾ ಕಪೂರ್‌</p></div>

ಸೈಫ್‌ ಅಲಿ ಖಾನ್‌, ಕರೀನಾ ಕಪೂರ್‌

   

ಪಿಟಿಐ ಚಿತ್ರಗಳು

ಮುಂಬೈ: ತಮ್ಮ ಪತಿ ಹಾಗೂ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ ದುಷ್ಕರ್ಮಿಯು ಆಕ್ರಮಣಕಾರಿಯಾಗಿ ವರ್ತಿಸಿದ. ಆದರೆ, ಬಹಿರಂಗವಾಗಿಯೇ ಇಟ್ಟಿದ್ದ ಆಭರಣಗಳನ್ನು ಮುಟ್ಟಿರಲಿಲ್ಲ ಎಂದು ನಟಿ ಕರೀನಾ ಕಪೂರ್‌ ಪೊಲೀಸರಿಗೆ ಶನಿವಾರ ತಿಳಿಸಿದ್ದಾರೆ.

ADVERTISEMENT

ಮುಂಬೈನ ಬಾಂದ್ರಾದಲ್ಲಿರುವ 'ಸದ್ಗುರು ಶರಣ್' ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿರುವ ದಂಪತಿಯ ನಿವಾಸಕ್ಕೆ ನುಗ್ಗಿದ್ದ ದುಷ್ಕರ್ಮಿಯು, ಸೈಫ್‌ ಅವರ ಮೇಲೆ ಗುರುವಾರ ಮುಂಜಾನೆ ಚಾಕುವಿನಿಂದ ದಾಳಿ ಮಾಡಿದ್ದ.

ಗಂಭೀರವಾಗಿ ಗಾಯಗೊಂಡಿರುವ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುಷ್ಕರ್ಮಿಯು ನಿವಾಸಕ್ಕೆ ನುಗ್ಗಿರುವುದನ್ನು ಮೊದಲು ಗಮನಿಸಿದ್ದು ಮನೆಗೆಲಸದಾಕೆ ಎಲಿಯಾಮಾ ಫಿಲಿಪ್ಸ್‌. ಅವರು ಕೂಡಲೇ ಚೀರುತ್ತಾ ಸೈಫ್‌ ಅವರನ್ನು ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಸೈಫ್‌ ಮತ್ತು ದುಷ್ಕರ್ಮಿ ನಡುವೆ ಹೊಡೆದಾಟವಾಗಿತ್ತು. ಆಗ ಆತ ಚಾಕುವಿನಿಂದ ಆರು ಬಾರಿ ಸೈಫ್‌ಗೆ ಇರಿದಿದ್ದ. ರಕ್ಷಣೆಗೆ ಧಾವಿಸಿದ ಎಲಿಯಾಮಾ ಮತ್ತು ಗೀತಾ ಎಂಬ ಇನ್ನೊಬ್ಬ ಸಿಬ್ಬಂದಿಗೂ ಗಾಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಂದಿದ್ದ ಕರೀನಾ ಸಹೋದರಿ ಕರೀಷ್ಮಾ ಕಪೂರ್‌, ಆಘಾತಗೊಂಡಿದ್ದ ಕರೀನಾ ಅವರನ್ನು ತಮ್ಮ ನಿವಾಸಕ್ಕೆ ಕರೆದೊಯ್ದಿದ್ದರು.

ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಕರೀನಾ, ಹೊಡೆದಾಟದ ವೇಳೆ ದುಷ್ಕರ್ಮಿಯು ತುಂಬಾ ಆಕ್ರಮಣಕಾರಿಯಾಗಿ ವರ್ತಿಸಿದ. ಸೈಫ್‌ ಅವರ ಮೇಲೆ ಮತ್ತೆ ಮತ್ತೆ ದಾಳಿ ಮಾಡಿದ. ಆದರೆ, ಕಾಣುವಂತೆಯೇ ತೆರೆದ ಸ್ಥಳದಲ್ಲಿ ಇಟ್ಟಿದ್ದ ಆಭರಣಗಳನ್ನು ಆತ ಮುಟ್ಟಿರಲಿಲ್ಲ ಎಂದು ತಿಳಿಸಿದ್ದಾರೆ. ಅವರಿಂದ ಇನ್ನಷ್ಟು ಹೇಳಿಕೆಗಳನ್ನು ಪಡೆದುಕೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಯು ಕಳ್ಳತನದ ಸಲುವಾಗಿ ಸೈಫ್‌ ನಿವಾಸಕ್ಕೆ ನುಗ್ಗಿರಬಹುದು ಎಂದು ಹೇಳಲಾಗಿತ್ತು. ಆದರೆ, ಕರೀನಾ ಹೇಳಿಕೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಘಟನೆ ನಡೆದು 48 ಗಂಟೆಗಳು ಕಳೆದಿವೆ. ಪೊಲೀಸರು 30 ತಂಡಗಳನ್ನು ರಚಿಸಿದ್ದರೂ, ದುಷ್ಕರ್ಮಿ ಪತ್ತೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.