ADVERTISEMENT

ಕೋಲ್ಕತ್ತ | ವೈದ್ಯ ವಿದ್ಯಾರ್ಥಿನಿಯ ಕೊಲೆ: ರಾಯ್ ತಪ್ಪಿತಸ್ಥ; ನ್ಯಾಯಾಲಯ ತೀರ್ಪು

ಪಿಟಿಐ
Published 18 ಜನವರಿ 2025, 14:28 IST
Last Updated 18 ಜನವರಿ 2025, 14:28 IST
<div class="paragraphs"><p>ನ್ಯಾಯಾಲಯ ತೀರ್ಪು</p></div>

ನ್ಯಾಯಾಲಯ ತೀರ್ಪು

   

ಕೋಲ್ಕತ್ತ: ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಕೊಂದಿದ್ದು ಸಂಜಯ್‌ ರಾಯ್‌ ಎಂದು ಇಲ್ಲಿನ ನ್ಯಾಯಾಲಯವು ಶನಿವಾರ ಹೇಳಿದೆ. ಈ ಹೀನ ಅಪರಾಧ ಎಸಗಿರುವ ರಾಯ್‌ಗೆ ಶಿಕ್ಷೆ ಏನು ಎಂಬುದನ್ನು ನ್ಯಾಯಾಲಯವು ಸೋಮವಾರ ಪ್ರಕಟಿಸಲಿದೆ.

2024ರ ಆಗಸ್ಟ್‌ 9ರಂದು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯು ದೇಶದಾದ್ಯಂತ ಆಕ್ರೋಶ ಮೂಡಲು ಕಾರಣವಾಗಿತ್ತು. ಈ ಕೃತ್ಯವನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣದ ವಿಚಾರಣೆಯನ್ನು ಇಲ್ಲಿನ ಸಿಯಾಲದಹ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ನಡೆಸಿದ್ದರು.

ADVERTISEMENT

ಅಪರಾಧ ಕೃತ್ಯ ನಡೆದ 162ನೆಯ ದಿನ ಈ ಆದೇಶ ಪ್ರಕಟವಾಗಿದೆ. ಪ್ರಕರಣದ ಗೋಪ್ಯ ವಿಚಾರಣೆಯು ಸರಿಸುಮಾರು ಎರಡು ತಿಂಗಳು ನಡೆದಿತ್ತು. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 64 (ಅತ್ಯಾಚಾರ), ಸೆಕ್ಷನ್‌ 66 (ಮಹಿಳೆಯ ಸಾವಿಗೆ ಕಾರಣವಾಗುವುದು) ಹಾಗೂ ಸೆಕ್ಷನ್ 103(1) (ಹತ್ಯೆ) ಅಡಿಯಲ್ಲಿ ರಾಯ್ ಅಪರಾಧಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. ರಾಯ್ ವಿರುದ್ಧದ ಎಲ್ಲ ಆರೋಪಗಳನ್ನು ಸಿಬಿಐ ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.

ಸೆಕ್ಷನ್ 103(1)ರ ಅಡಿಯಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಇದೆ.

ರಾಯ್‌ನ ಹೇಳಿಕೆಯನ್ನು ಸೋಮವಾರ ಮಧ್ಯಾಹ್ನ 12.30ಕ್ಕೆ ಆಲಿಸಲಾಗುವುದು. ನಂತರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶ ದಾಸ್ ತಿಳಿಸಿದ್ದಾರೆ. ನ್ಯಾಯಾಧೀಶರು ಆದೇಶ ನೀಡುತ್ತಿದ್ದ ಸಂದರ್ಭದಲ್ಲಿ ರಾಯ್‌, ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ಹೇಳಿಕೊಂಡ.

‘ನಾನು ರುದ್ರಾಕ್ಷಿಯ ಹಾರ ಹಾಕಿಕೊಳ್ಳುತ್ತೇನೆ. ನಾನು ಅಪರಾಧ ಎಸಗಿದ್ದಿದ್ದರೆ ಅದು ತುಂಡಾಗಬೇಕಿತ್ತು’ ಎಂದು ರಾಯ್ ತನ್ನನ್ನು ಸಮರ್ಥಿಸಿಕೊಂಡಿದ್ದ.

ಆದೇಶ ಪ್ರಕಟವಾದ ನಂತರ ಪೊಲೀಸರು ರಾಯ್‌ನನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯದಿಂದ ಹೊರಗೆ ಕರೆದೊಯ್ದರು. ರಾಯ್‌ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಯಾವುದೇ ಮಾತುಕತೆ ನಡೆಯಲು ಪೊಲೀಸರು ಅವಕಾಶ ನೀಡಲಿಲ್ಲ.

ಆರ್.ಜಿ. ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಕೋಲ್ಕತ್ತದ ಮಾಜಿ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಅವರಿಗೂ ಶಿಕ್ಷೆಯಾಗಿದ್ದಿದ್ದರೆ ನಮಗೆ ಹೆಚ್ಚು ಸಂತಸವಾಗುತ್ತಿತ್ತು. ಅಪರಾಧದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ತನಿಖೆ ಆಗಬೇಕು.
– ಸುವೇಂದು ಅಧಿಕಾರಿ ಬಿಜೆಪಿ ಮುಖಂಡ

ಪ್ರಕರಣದ ಪ್ರಮುಖ ಅಂಶಗಳು

* ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣದಲ್ಲಿ ಸಂಜಯ್ ರಾಯ್ ಮಾತ್ರವೇ ಆರೋಪಿ ಎಂದು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಹೇಳಿತ್ತು 

* ಕೋಲ್ಕತ್ತ ನಗರ ಪೊಲೀಸ್ ಇಲಾಖೆಯಲ್ಲಿ ರಾಯ್ ನಾಗರಿಕ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ

* ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ ಕೋಲ್ಕತ್ತ ಪೊಲೀಸರು ರಾಯ್‌ನನ್ನು ಆಗಸ್ಟ್‌ 10ರಂದು ಬಂಧಿಸಿದ್ದರು. ನಂತರ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಕಲ್ಕತ್ತ ಹೈಕೋರ್ಟ್‌ ಆದೇಶಿಸಿತ್ತು

* ನವೆಂಬರ್ 12ರಂದು ಆರಂಭವಾದ ಗೋಪ್ಯ ವಿಚಾರಣೆಯಲ್ಲಿ ಒಟ್ಟು 50 ಸಾಕ್ಷಿಗಳ ಹೇಳಿಕೆ ಪಡೆಯಲಾಗಿತ್ತು

ಇತರರಿಗೂ ಶಿಕ್ಷೆಯಾಗಬೇಕು: ಸಂತ್ರಸ್ತೆಯ ತಾಯಿ...

ಕೋಲ್ಕತ್ತ (ಪಿಟಿಐ): ಸಂಜಯ್‌ ರಾಯ್ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿರುವುದನ್ನು ಸ್ವಾಗತಿಸಿರುವ ವೈದ್ಯ ವಿದ್ಯಾರ್ಥಿನಿಯ ತಾಯಿ ಇತರ ಕ್ರಿಮಿನಲ್‌ ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ನೋಡಲು ತಾವು ಕಾಯುತ್ತಿರುವುದಾಗಿ ಹೇಳಿದ್ದಾರೆ.

‘ಜೈವಿಕ ಸಾಕ್ಷ್ಯಗಳನ್ನು ಆಧರಿಸಿ ಸಂಜಯ್ ರಾಯ್ ಅಪರಾಧಿ ಎಂಬುದು ಸಾಬೀತಾಗಿದೆ. ವಿಚಾರಣೆ ಸಂದರ್ಭದಲ್ಲಿ ಈತ ನ್ಯಾಯಾಲಯದಲ್ಲಿ ಮೌನವಾಗಿ ನಿಂತಿರುತ್ತಿದ್ದ. ಇದು ನನ್ನ ಮಗಳನ್ನು ಹಿಂಸಿಸಿ ಕೊಂದ ಕೃತ್ಯದಲ್ಲಿ ಈತನ ಪಾತ್ರವನ್ನು ಸಾಬೀತು ಮಾಡುತ್ತದೆ. ಆದರೆ ಆತ ಒಬ್ಬನೇ ಅಲ್ಲ ಇನ್ನೂ ಬಂಧನವಾಗದ ಇತರ ಹಲವರು ಇದ್ದಾರೆ. ನ್ಯಾಯ ಇನ್ನೂ ಸಿಕ್ಕಿಲ್ಲ’ ಎಂದು ತಾಯಿಯು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜೀವನದ ಕೊನೆಯವರೆಗೂ ತಾವು ಮತ್ತು ತಮ್ಮ ಪತಿ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ. ‘ನಮ್ಮ ಮಗಳ ಕೊಲೆಯಲ್ಲಿ ಭಾಗಿಯಾದ ಇತರರಿಗೆ ಶಿಕ್ಷೆಯಾದಾಗ ಈ ಪ್ರಕರಣ ಅಂತ್ಯಗೊಳ್ಳುತ್ತದೆ. ಆ ದಿನಕ್ಕಾಗಿ ನಾವು ಕಾಯುತ್ತೇವೆ... ಅಲ್ಲಿಯವರೆಗೆ ನಮಗೆ ನಿದ್ದೆ ಬರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.