
ಸುಪ್ರೀಂ ಕೋರ್ಟ್ ಎದುರು ಉನ್ನಾವೋ ಅತ್ಯಾಚಾರ ಸಂತ್ರಸ್ತೆ
ಕೃಪೆ: ಪಿಟಿಐ
ಉನ್ನಾವೊ: ಇತ್ತೀಚೆಗೆ ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿರುವ ಉನ್ನಾವೊ ಅತ್ಯಾಚಾರ ಸಂತ್ರಸ್ತೆ, ಜನರು ಜಾತಿ–ಮತಗಳನ್ನು ಬದಿಗಿಟ್ಟು ತಮಗೆ ಬೆಂಬಲ ನೀಡಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸೆಂಗಾರ್ ಅವರ ಮಗಳು ಇತ್ತೀಚೆಗಷ್ಟೇ, ತಮ್ಮ ತಂದೆ ನಿರಪರಾಧಿ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ವಿಚಾರಣಾ ನ್ಯಾಯಾಲಯವು 2019ರಲ್ಲಿ ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ಸೆಂಗರ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಅರ್ಜಿ ಇತ್ಯರ್ಥವಾಗುವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, 2025ರ ಡಿಸೆಂಬರ್ 23ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ದೆಹಲಿ ಹೈಕೋರ್ಟ್ ಆದೇಶದ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಇತರರ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಡಿಸೆಂಬರ್ 29ರಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ಸೆಂಗಾರ್ ಬೆಂಬಲಿಗರಿಂದ ಅಪಪ್ರಚಾರ
ವಿಡಿಯೊ ಹಂಚಿಕೊಂಡಿರುವ ಸಂತ್ರಸ್ತೆ, ಸೆಂಗಾರ್ ಬೆಂಬಲಿಗರು ತಮ್ಮ ಹಾಗೂ ತಮ್ಮ ಪತಿಯ ಕುರಿತು ಕಳೆದ ಎರಡು ದಿನಗಳಿಂದ (ಸುಪ್ರೀಂ ಆದೇಶದ ಬಳಿಕ) ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ತಂದೆಯನ್ನು ಬೆಂಬಲಿಸುವ ಸಲುವಾಗಿ ಸೆಂಗಾರ್ ಪುತ್ರಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜನವರಿ 11ರಂದು 'ಕ್ಷತ್ರಿಯ ಸಮಾವೇಶ'ಕ್ಕೆ ಕರೆ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಹರಡಲಾಗುತ್ತಿದೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ.
'ನಾನೂ ಕ್ಷತ್ರಿಯ ಸಮುದಾಯದ ಮಗಳೇ. ನಾನೂ ಈ ದೇಶದ ಮಗಳೇ. ದಯವಿಟ್ಟು ನನಗೆ ಧ್ವನಿಯಾಗಿ. ಅಪರಾಧಕ್ಕೆ ಯಾವುದೇ ಜಾತಿಯಿಲ್ಲ' ಎಂದು ಮನವಿ ಮಾಡಿದ್ದಾರೆ.
ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂಬುದನ್ನು ಪುನರುಚ್ಚರಿಸಿರುವ ಅವರು, ಅಪರಾಧಿಯನ್ನು ಬೆಂಬಲಿಸುವ ಬದಲು, ನ್ಯಾಯಕ್ಕಾಗಿನ ಹೋರಾಟದಲ್ಲಿ ತಮ್ಮ ಜೊತೆ ನಿಲ್ಲುವಂತೆ ಜನರನ್ನು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.