
ಕಾಲ್ತುಳಿತ ನಡೆದ ಸ್ಥಳ
ಪಿಟಿಐ
ಪ್ರಯಾಗರಾಜ್: ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತ ಘಟನೆ ಕಾರಣ ಪ್ರಯಾಗರಾಜ್‌ನ ಹಲವು ಹೋಟೆಲ್‌ಗಳ ಬುಕ್ಕಿಂಗ್‌ನಲ್ಲಿ ತೀವ್ರ ಕುಸಿತ ಉಂಟಾಗಿದೆ. ವಸಂತ ಪಂಚಮಿ ಸ್ನಾನದ ಬಳಿಕ ಭಕ್ತರ ಸಂಖ್ಯೆ ಅಧಿಕಗೊಳ್ಳಬಹುದೆಂದು ಹೋಟೆಲ್ ಮಾಲೀಕರು ನಿರೀಕ್ಷಿಸುತ್ತಿದ್ದಾರೆ.
ಕಾಲ್ತುಳಿತ ಘಟನೆ ಸಂಭವಿಸಿದ್ದರಿಂದ ಮಹಾಕುಂಭ ಮೇಳಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಪೊಲೀಸರು ನಿಯಂತ್ರಿಸಿದ್ದರು. ಮೇಳಕ್ಕೆ ಬರುವ ಹಲವು ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಈ ಕಾರಣದಿಂದ ಈಗಾಗಲೇ ಬುಕ್ಕಿಂಗ್ ಮಾಡಿಕೊಂಡಿದ್ದ ಭಕ್ತರು ಹೋಟೆಲ್‌ಗಳಿಗೆ ಬರಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ, ಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
‘ಕಾಲ್ತುಳಿತ ಘಟನೆ ಬಳಿಕ ಮುಂಗಡ ಬುಕ್ಕಿಂಗ್ ಮಾಡಿದವರು ಸಹ ಆಗಮಿಸುತ್ತಿಲ್ಲ. ಜೊತೆಗೆ, ಪ್ರಯಾಗರಾಜ್‌ನ ಹೋಟೆಗಳಲ್ಲಿ ಶೇ 40ರಿಂದ ಶೇ 50ರಷ್ಟು ಹೋಟೆಲ್ ಕೊಠಡಿಗಳು ಖಾಲಿಯಾಗಿವೆ’ ಎಂದು ಪ್ರಯಾಗರಾಜ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಭಿವೃದ್ಧಿ ಸಂಘದ ಅಧ್ಯಕ್ಷ ಸರ್ದಾರ್ ಹರ್ಜೀತ್ ಸಿಂಗ್ ಮಾಹಿತಿ ನೀಡಿದರು.
‘ಸಾಮಾಜಿಕ ಜಾಲತಾಣಗಳ ಇನ್‌ಫ್ಲ್ಯುಯೆಂಸರ್‌ಗಳು ಮತ್ತು ಯುಟ್ಯೂಬರ್‌ಗಳು ಕಾಲ್ತುಳಿತ ಘಟನೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದರು. ಇದರಿಂದ ಭಕ್ತರು ಭಯಗೊಂಡರು. ವದಂತಿಗಳನ್ನು ನಂಬಿ ಬುಕ್ಕಿಂಗ್ ಅನ್ನು ರದ್ದು ಮಾಡಲು ಮುಂದಾದರು. ಹಲವು ಕೋರಿಕೆ ಬಳಿಕ ಕೆಲವು ಭಕ್ತರು ಬುಕ್ಕಿಂಗ್ ರದ್ದು ಮಾಡಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.