ಸೋನಮ್ ವಾಂಗ್ಚುಕ್
(ಪಿಟಿಐ ಚಿತ್ರ)
ನವದೆಹಲಿ: ಸಂವಿಧಾನದ 6ನೇ ಪರಿಚ್ಛೇದಕ್ಕೆ ಲಡಾಖ್ ಸೇರಿಸುವಂತೆ ಒತ್ತಾಯಿಸಿ ಶೀಘ್ರದಲ್ಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಶನಿವಾರ ತಿಳಿಸಿದ್ದಾರೆ.
ಅನಿರ್ದಿಷ್ಟಾವಧಿ ಉಪಗ್ರಹ ಸತ್ಯಾಗ್ರಹಕ್ಕೆ ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ. ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಸದಸ್ಯ ಸಜ್ಜದ್ ಹುಸೇನ್ ಸೇರಿದಂತೆ ಇನ್ನಷ್ಟು ನಾಯಕರು ಆಂದೋಲನಕ್ಕೆ ಕೈಜೋಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಬೇಕೆಂಬ ಬೇಡಿಕೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ನಾನು ಮತ್ತು ಲಡಾಖ್‌ನ ಇತರ ಪ್ರತಿಭಟನಕಾರರು ಅನಿರ್ದಿಷ್ಟಾವಧಿ ಉಪವಾಸ ಕುಳಿತುಕೊಳ್ಳುವುದಾಗಿ ವಾಂಗ್ಚುಕ್ ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೇಳಲಾಗಿತ್ತು. ಆದರೆ ಈವರೆಗೆ ಅನುಮತಿ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳು ‘ದೆಹಲಿ ಚಲೋ ಪಾದಯಾತ್ರೆ’ಯನ್ನು ವಾಂಗ್ಚುಕ್ ಆರಂಭಿಸಿದ್ದರು. ಆದರೆ ದೆಹಲಿಯಲ್ಲಿ ಪಾದಯಾತ್ರೆ ತಡೆದಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು. ದೆಹಲಿಯ ಸಿಂಘು ಗಡಿಯಲ್ಲಿ ಸುಮಾರು 150 ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.