ಲೇಹ್ ಬಂದ್ ಸಂದರ್ಭದಲ್ಲಿ ದುಷ್ಕರ್ಮಿಗಳು ಕಟ್ಟಡವೊಂದಕ್ಕೆ ಬೆಂಕಿ ಇಟ್ಟಿದ್ದರಿಂದ ದಟ್ಟ ಹೊಗೆ ಆವರಿಸಿತ್ತು
–ಪಿಟಿಐ ಚಿತ್ರ
ನವದೆಹಲಿ: ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹಿಂಸಾಚಾರವನ್ನು ಸೂಕ್ಷ್ಮವಾಗಿ ನಿರ್ವಹಿಸುವ ಅಗತ್ಯವಿದೆ. ಇದರ ಹಿಂದಿನ ಕಾರಣಗಳೇನು? ಯಾರೆಲ್ಲ ಇದ್ದಾರೆ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ವಿರೋಧ ಪಕ್ಷಗಳು ಬುಧವಾರ ಹೇಳಿವೆ.
ಆದಾಗ್ಯೂ, ಹಿಂಸಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ ಎಂದೂ ಟೀಕೆ ಮಾಡಿವೆ.
ಕಾಂಗ್ರೆಸ್ ಸಂಸದ ಹಾಗೂ ವಕ್ತಾರ ಮನೀಷ್ ತಿವಾರಿ ಅವರು, ಲಡಾಖ್ – ದೇಶದ ಗಡಿಯಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿದೆ. ಚೀನಾದೊಂದಿಗಿನ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಏಕೆ ಮತ್ತು ಹೇಗೆ ಹಿಂಸಾಚಾರಕ್ಕೆ ತಿರುಗಿತು ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕಿದೆ. ವಿಧಿವಿಜ್ಞಾನ ಪರೀಕ್ಷೆ ನಡೆಸಬೇಕಿದೆ. ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ಕೊಂಡೊಯ್ದ ಪ್ರಚೋದನೆಗಳೇನು? ಗಲಭೆಕೋರರು ಯಾರು? ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, 'ಲೇಹ್ ಪಟ್ಟಣದಲ್ಲಿನ ಪರಿಸ್ಥಿತಿಯು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನಿರಾಕರಿಸಿರುವುದರಿಂದ ಜನರು ಎಂತಹ ಭಾವನೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದರ ಕುರಿತು ಕಣ್ಣು ತೆರೆಸಲಿ' ಎಂದು ಹೇಳಿದ್ದಾರೆ.
'ಲಡಾಖ್ ಅನ್ನು 2019ರಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಅಲ್ಲಿಗೆ, ರಾಜ್ಯ ಸ್ಥಾನಮಾನ ನೀಡುವ ಭರವಸೆಯನ್ನೇನೂ ನೀಡಿಲ್ಲ. ಆದಾಗ್ಯೂ, ಅಲ್ಲಿನ ಜನರು ದ್ರೋಹಕ್ಕೆ ಒಳಗಾಗಿರುವುದಾಗಿ ಭಾವಿಸಿದ್ದು, ಆಕ್ರೋಶಗೊಂಡಿದ್ದಾರೆ' ಎಂದು ಅಬ್ದುಲ್ಲಾ ಹೇಳಿದ್ದಾರೆ.
ಬುಧವಾರ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಕನಿಷ್ಠ ನಾಲ್ವರು ಮೃತಪಟ್ಟು, ಪೊಲೀಸರೂ ಸೇರಿದಂತೆ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
'2019ರಿಂದ ಈಚೆಗೆ ವಾಸ್ತವದಲ್ಲಿ ಯಾವ ಬದಲಾವಣೆಯಾಗಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರವು ಪ್ರಾಮಾಣಿಕ ಹಾಗೂ ಸಮಗ್ರ ಮೌಲ್ಯಮಾಪನ ಕೈಗೊಳ್ಳುವ ಸಮಯ ಇದಾಗಿದೆ' ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
ಶಾಂತಿ ಬಯಸುವ ಲಡಾಖ್‌ನಂತಹ ಪ್ರದೇಶವು ಹಿಂಸಾಚಾರಕ್ಕೆ ತಿರುಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವೇ ಇಲ್ಲ ಎಂದಿರುವ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಸರ್ಕಾರವು ಅಲ್ಲಿನ ಜನರೊಂದಿಗೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.