ADVERTISEMENT

ಲಖಿಂಪುರ ಖೇರಿ ಪ್ರಕರಣ: ನ್ಯಾಯಕ್ಕಾಗಿ ರೈತರಿಂದ 'ರೈಲ್‌ ರೋಕೊ' ಪ್ರತಿಭಟನೆ

ಪಿಟಿಐ
Published 18 ಅಕ್ಟೋಬರ್ 2021, 8:32 IST
Last Updated 18 ಅಕ್ಟೋಬರ್ 2021, 8:32 IST
ಅಮೃತಸರದಲ್ಲಿ 'ರೈಲ್‌ ರೋಕೊ' ಪ್ರತಿಭಟನೆ ನಡೆಸುತ್ತಿರುವ ರೈತರು
ಅಮೃತಸರದಲ್ಲಿ 'ರೈಲ್‌ ರೋಕೊ' ಪ್ರತಿಭಟನೆ ನಡೆಸುತ್ತಿರುವ ರೈತರು   

ಚಂಡೀಗಡ: ಪಂಜಾಬ್‌ನಲ್ಲಿ ರೈತರು ಸೋಮವಾರ ರೈಲ್ವೆ ಹಳಿಗಳ ಮೇಲೆ ಕುಳಿತು ಆರು ಗಂಟೆಗಳ 'ರೈಲ್‌ ರೋಕೊ' (ರೈಲು ತಡೆ) ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಸ್ಥಾನದಿಂದ ವಜಾ ಮಾಡಬೇಕು ಮತ್ತು ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ಸದಸ್ಯರು ಒತ್ತಾಯಿಸಿದ್ದಾರೆ.

ಫಿರೋಜ್‌ಪುರ್‌ ವಿಭಾಗದ ನಾಲ್ಕು ವಲಯಗಳನ್ನು ಪ್ರತಿಭಟನಾಕಾರರು ನಿರ್ಬಂಧಿಸಿರುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫಿರೋಜ್‌ಪುರ್–ಫಜಿಲ್ಕಾ ಹಾಗೂ ಫಿರೋಜ್‌ಪುರ್‌–ಲೂಧಿಯಾನಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ರೈಲು ತಡೆಯಿಂದಾಗಿ ಉತ್ತರ ರೈಲ್ವೆ ವಲಯದ 130 ಸ್ಥಳಗಳಲ್ಲಿ 50 ರೈಲುಗಳ ಸಂಚಾರಕ್ಕೆ ಅಡಚಣೆ ಎದುರಾಗಿದೆ.

ADVERTISEMENT

ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಬಂಧಿಸುವಂತೆ ಕಿಸಾನ್‌ ಮಜದೂರ್‌ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವನ್‌ ಸಿಂಗ್‌ ಪಂಧೇರ್‌ ಆಗ್ರಹಿಸಿದ್ದಾರೆ. ರಾಜ್ಯದ 11 ಜಿಲ್ಲೆಗಳಲ್ಲಿ 20 ಕಡೆ ಸಮಿತಿಯು ಪ್ರತಿಭಟನೆ ನಡೆಸಲಿದೆ ಎಂದಿದ್ದಾರೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್‌ ಮೋರ್ಚಾ ರೈತ ಸಂಘಟನೆ ಒಕ್ಕೂಟವು, 'ಲಖಿಂಪುರ ಖೇರಿ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟದ ತೀವ್ರತೆ ಹೆಚ್ಚಿಸಲಾಗುತ್ತದೆ' ಎಂದು ಹೇಳಿದೆ.

ಬೆಳಿಗ್ಗೆ 10ರಿಂದ ಸಂಜೆ ನಾಲ್ಕರವರೆಗೂ ಎಲ್ಲ ರೈಲುಗಳ ಸಂಚಾರವನ್ನು ತಡೆಯಲು ರೈತ ಸಂಘಟನೆಗಳು ಕರೆ ನೀಡಿವೆ. ರೈಲ್ವೆ ಆಸ್ತಿಗೆ ಯಾವುದೇ ಹಾನಿಯಾಗದಂತೆ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ಪ್ರತಿಭಟನಾಕಾರರಿಗೆ ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ.

ಅಕ್ಟೋಬರ್‌ 3ರಂದು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ 8 ಜನರ ಪೈಕಿ ನಾಲ್ವರು ರೈತರು. ಬಿಜೆಪಿ ಕಾರ್ಯಕರ್ತರಿದ್ದ ವಾಹನಗಳು ರೈತರ ಮೇಲೆ ಹರಿದು ನಾಲ್ವರು ರೈತರು ಸಾವಿಗೀಡಾದರು. ಅನಂತರ ಆಕ್ರೋಶಗೊಂಡ ಪ್ರತಿಭಟನಾಕಾರರು ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿದರು. ಆ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ವಾಹನ ಚಾಲಕ ಮೃತಪಟ್ಟರು.

ರೈತರ ಮೇಲೆ ನುಗ್ಗಿದ ವಾಹನಗಳ ಪೈಕಿ ಒಂದರಲ್ಲಿ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಸಹ ಇದ್ದರು ಎಂದು ರೈತರು ಆರೋಪಿಸಿದ್ದಾರೆ. ರೈತರ ಸಾವಿನ ಪ್ರಕರಣದ ಸಂಬಂಧ ಅಕ್ಟೋಬರ್‌ 9ರಂದು ಆಶಿಶ್‌ ಮಿಶ್ರಾ ಅವರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.