ADVERTISEMENT

ಲಖಿಂಪುರ ಖೇರಿ ಪ್ರಕರಣ: ಪೂರ್ವಯೋಜಿತ ಷಡ್ಯಂತ್ರ– ಎಸ್‌ಐಟಿ ವರದಿ

ನ್ಯಾಯಾಲಯಕ್ಕೆ ಎಸ್‌ಐಟಿ ಹೇಳಿಕೆ

ಪಿಟಿಐ
Published 15 ಡಿಸೆಂಬರ್ 2021, 10:53 IST
Last Updated 15 ಡಿಸೆಂಬರ್ 2021, 10:53 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಲಖಿಂಪುರ ಖೇರಿ: ನಾಲ್ವರು ರೈತರು ಸೇರಿ ಎಂಟು ಮಂದಿಯ ಹತ್ಯೆಯಾದ ಲಖಿಂಪುರ–ಖೇರಿ ಪ್ರಕರಣವು ‘ಹತ್ಯೆ ಉದ್ದೇಶದ ಪೂರ್ವಯೋಜಿತ ಷಡ್ಯಂತ್ರ’ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಹೇಳಿದೆ. ‘ನಿರ್ಲಕ್ಷ್ಯದಿಂದ ಕೊಲೆ ಯತ್ನ’ ಎಂಬಂತಹ ಕಡಿಮೆ ಗಂಭೀರವಾದ ಆರೋಪಗಳನ್ನು ಬದಲಿಸಿ ಭಾರತೀಯ ದಂಡ ಸಂಹಿತೆಯ 307ನೇ ಸೆಕ್ಷನ್‌ (ಕೊಲೆ ಯತ್ನ) ಅಡಿ ಆರೋಪ ದಾಖಲಿಸಬೇಕು ಎಂದು ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರನ್ನು ಎಸ್‌ಐಟಿ ಮಂಗಳವಾರ ಕೋರಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ 279 (ಅತಿ ವೇಗದಲ್ಲಿ ವಾಹನ ಚಾಲನೆ), 338 (ನಿರ್ಲಕ್ಷ್ಯದಿಂದ ಗಂಭೀರವಾಗಿ ಗಾಯಗೊಳಿಸುವುದು), 304 ಎ (ವೇಗ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಮುಂತಾದವುಗಳನ್ನು ಕೈಬಿಡಬೇಕು ಎಂದು ಎಸ್‌ಐಟಿ ಮನವಿ ಮಾಡಿದೆ.

ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 147 (ಗಲಭೆ), 148 (ಅಪಾಯಕಾರಿ ಆಯುಧ ಹಿಡಿದು ಹಲ್ಲೆ), 120 ಬಿ (ಅಪರಾಧ ಒಳಸಂಚು) ಮುಂತಾದವುಗಳ ಅಡಿಯಲ್ಲಿ ದಾಖಲಿಸಲಾದ ಆರೋಪಗಳನ್ನು ಉಳಿಸಿಕೊಳ್ಳಬೇಕು ಎಂದೂ ಎಸ್‌ಐಟಿ ಹೇಳಿದೆ. ಸೆಕ್ಷನ್‌ 34 (ಹಲವರು ಒಟ್ಟು ಸೇರಿ ಒಂದೇ ಉದ್ದೇಶದಿಂದ ಕೃತ್ಯ ಎಸಗುವುದು), ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿಯೂ ಆರೋಪ ದಾಖಲಿಸಬೇಕು ಎಂದು ವಿನಂತಿಸಲಾಗಿದೆ.

ADVERTISEMENT

ಅಕ್ಟೋಬರ್‌ 3ರಂದು ಲಖಿಂಪುರ ಖೇರಿ ಪ್ರಕರಣ ನಡೆದಿತ್ತು. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರು ಪ್ರಕರಣದ ಪ್ರಮುಖ ಆರೋಪಿ.

‘ಎಸ್‌ಐಟಿಯ ಮುಖ್ಯ ತನಿಖಾಧಿಕಾರಿ ವಿದ್ಯಾರಾಮ್‌ ದಿವಾಕರ್‌ ಅವರು ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಚಿಂತಾರಾಮ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಐವರ ಹತ್ಯೆ ಮತ್ತು ಹಲವರು ಗಾಯಗೊಳ್ಳಲು ಕಾರಣವಾದ ಘಟನೆಗೆ ನಿರ್ಲಕ್ಷ್ಯ ಕಾರಣ ಅಲ್ಲ. ಅದು ಹತ್ಯೆ ಉದ್ದೇಶದ ಪೂರ್ವಯೋಜಿತ ಷಡ್ಯಂತ್ರ ಎಂದು ಮನವಿಯಲ್ಲಿ ಹೇಳಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ (ಎಸ್‌ಪಿಒ) ಎಸ್‌.ಪಿ. ಯಾದವ್‌ ತಿಳಿಸಿದ್ದಾರೆ.

ಆರೋಪಗಳನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಕೋರ್ಟ್‌ ಸೂಚಿಸಿದೆ.

ಉತ್ತರ ಪ್ರದೇಶ ಸರ್ಕಾರವು ಪ್ರಕರಣದ ತನಿಖೆಗೆ ಒಂಬತ್ತು ಸದಸ್ಯರ ಎಸ್‌ಐಟಿಯನ್ನು ರಚಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ಈ ಎಸ್‌ಐಟಿಯನ್ನು ಪುನರ್‌ರಚನೆ ಮಾಡಿತ್ತು. ಪಂಜಾಬ್‌-ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಕೇಶ್‌ ಕುಮಾರ್‌ ಜೈನ್‌ ಅವರನ್ನು ತನಿಖೆಯ ಉಸ್ತುವಾರಿಗೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿದೆ.

ಪ್ರಕರಣದಲ್ಲಿ ಎರಡು ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ ಸಂಖ್ಯೆ 2019ರಲ್ಲಿ 13 ಆರೋಪಿಗಳನ್ನು ಎಸ್‌ಐಟಿ ಗುರುತಿಸಿದೆ. ಎರಡನೇ ಎಫ್‌ಐಆರ್‌ ಸಂಖ್ಯೆ 220ರಲ್ಲಿ ನಾಲ್ವರನ್ನು ಗುರುತಿಸಲಾಗಿದೆ. ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ.

ಅಜಯ್‌ ಮಿಶ್ರಾ ವಜಾಕ್ಕೆ ರಾಹುಲ್‌ ಆಗ್ರಹ
ನವದೆಹಲಿ:
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರನ್ನು ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.

‘2–3 ದೊಡ್ಡ ಉದ್ಯಮಿಗಳು ರೈತರ ವಿರುದ್ಧ ಇದ್ದಾರೆ. ಅವರ ಮುಂದಾಳುವಾಗಿ ನರೇಂದ್ರ ಮೋದಿ ಅವರು ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ರೈತರ ಮೇಲೆ ಅವರು ವಾಹನ ಹರಿಸಿದಾಗ, ಅವರ ಹಿಂದೆ ಇದ್ದ ಶಕ್ತಿ ಯಾವುದು? ಇಂತಹ ಸ್ವಾತಂತ್ರ್ಯ
ವನ್ನು ಅವರಿಗೆ ಕೊಟ್ಟವರು ಯಾರು? ಅವರು ಜೈಲಿನಿಂದ ಹೊರಗೆ ಉಳಿಯುವಂತೆ ಮಾಡಿದ ಶಕ್ತಿ ಯಾವುದು’ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

‘ಸಚಿವರೊಬ್ಬರು ರೈತರನ್ನು ಕೊಲ್ಲಲು ಯತ್ನಿಸಿದ್ದರು. ಅವರು ತಮ್ಮ ತಂಡದಲ್ಲಿಯೇ ಇದ್ದಾರೆ ಎಂಬುದು ಪ್ರಧಾನಿಗೆ ತಿಳಿದಿದೆ. ಈ ವಿಚಾರವನ್ನು ನಾವು ಎತ್ತಿದ್ದೇವೆ. ನಮಗೆ ಚರ್ಚೆಗೆ ಅವಕಾಶ ಕೊಡಲಿಲ್ಲ. ಚರ್ಚೆಗೆ ಯತ್ನಿಸಿದಾಗ ನಮ್ಮ ಧ್ವನಿ ಅಡಗಿಸಲಾಗಿದೆ’ ಎಂದು ರಾಹುಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.