ADVERTISEMENT

ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣ: ಆಶಿಶ್‌ ಮಿಶ್ರಾ 3 ದಿನ ಪೊಲೀಸ್‌ ವಶಕ್ಕೆ

ವಕೀಲರ ಸಮ್ಮುಖದಲ್ಲೇ ಆರೋಪಿ ವಿಚಾರಣೆಯ ಷರತ್ತು

ಪಿಟಿಐ
Published 11 ಅಕ್ಟೋಬರ್ 2021, 19:37 IST
Last Updated 11 ಅಕ್ಟೋಬರ್ 2021, 19:37 IST
ಆಶಿಶ್‌ ಮಿಶ್ರಾ
ಆಶಿಶ್‌ ಮಿಶ್ರಾ   

ಲಖಿಂಪುರ–ಖೇರಿ/ಬಹರೈಚ್‌:ಲಖಿಂಪುರ–ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಿದ ಪ್ರಕರಣದ ಪ್ರಮುಖ ಆರೋಪಿ,ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರನ್ನು ಮೂರು ದಿನ ಪೊಲೀಸ್‌ ವಶಕ್ಕೆ ಸೋಮವಾರ ಒಪ್ಪಿಸಲಾಗಿದೆ. ಇದೇ 3ರಂದು ನಡೆದ ಪ್ರಕರಣದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಮೃತಪಟ್ಟಿದ್ದರು.

‘ಆಶಿಶ್‌ ಅವರನ್ನು 14 ದಿನ ವಶಕ್ಕೆ ಕೊಡುವಂತೆ ಪೊಲೀಸರು ಕೇಳಿದ್ದರು. ಆದರೆ, ಮಂಗಳವಾರದಿಂದ ಶುಕ್ರವಾರದ ವರೆಗೆ ಮಾತ್ರ ವಶಕ್ಕೆ ಕೊಡಲಾಗಿದೆ’ ಎಂದು ತನಿಖಾಧಿಕಾರಿ ಎಸ್‌.ಪಿ. ಯಾದವ್‌ ತಿಳಿಸಿದ್ದಾರೆ.

ಆಶಿಶ್‌ ಅವರಿಗೆ ಕಿರುಕುಳ ನೀಡಬಾರದು ಮತ್ತು ಅವರ ವಕೀಲರ ಉಪಸ್ಥಿತಿಯಲ್ಲಿಯೇ ತನಿಖೆ ನಡೆಸಬೇಕು ಎಂಬ ಷರತ್ತನ್ನು ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಹಾಕಿದೆ. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಭಾನುವಾರ ಒಪ್ಪಿಸಲಾಗಿತ್ತು.

ADVERTISEMENT

ಶನಿವಾರ ಸುಮಾರು 12 ತಾಸು ವಿಚಾರಣೆಯ ಬಳಿಕ ಆಶಿಶ್‌ ಅವರನ್ನು ಬಂಧಿಸಲಾಗಿತ್ತು. ರೈತರ ಮೇಲೆ ಹರಿಸಿದ ಎಸ್‌ಯುವಿಯನ್ನು ಆಶಿಶ್‌ ಅವರೇ ಚಾಲನೆ ಮಾಡುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಅಜಯ್‌ ಮಿಶ್ರಾ ಮತ್ತು ಆಶಿಶ್‌ ಅಲ್ಲಗಳೆದಿದ್ದಾರೆ. ಆರೋಪಿಗಳನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿತ್ತು.

ರಾಜಕಾರಣಿಗಳಿಗಿಲ್ಲ ಸ್ಥಾನ:ಎಸ್‌ಯುವಿ ಹರಿದು ಮೃತಪಟ್ಟ ನಾಲ್ವರು ರೈತರಿಗೆ ಅಂತಿಮ ನಮನ ಸಲ್ಲಿಸಲು ಸಂಯುಕ್ತ ಕಿಸಾನ್‌ ಮೋರ್ಚಾ ಹಮ್ಮಿಕೊಂಡಿರುವ ಕಾರ್ಯಕ್ರಮದ ವೇದಿಕೆಯಲ್ಲಿ ರಾಜಕಾರಣಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

ತಿಕೋನಿಯ ಗ್ರಾಮದಲ್ಲಿ ಹಿಂಸಾಚಾರ ನಡೆದ ಸ್ಥಳದ ಸಮೀಪದಲ್ಲಿಯೇ ಅಂತಿಮ ನಮನ ಕಾರ್ಯಕ್ರಮ ನಡೆಯಲಿದೆ. ಅದರ ಸಿದ್ಧತೆಗಳು ನಡೆಯುತ್ತಿವೆ. ಕಾರ್ಯಕ್ರಮದ ವೇದಿಕೆಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾದ ನಾಯಕರು ಮಾತ್ರ ಇರಲಿದ್ದಾರೆ ಎಂದು ಬಿಕೆಯು ಜಿಲ್ಲಾ ಅಧ್ಯಕ್ಷ ಅಮನ್‌ದೀಪ್‌ ಸಿಂಗ್‌ ಸಂಧು ತಿಳಿಸಿದ್ದಾರೆ.

ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.