ADVERTISEMENT

ಲಕ್ಷದ್ವೀಪ ಆಡಳಿತಕ್ಕೆ ನಟಿ ಆಯಿಷಾರನ್ನು 'ದೇಶ ದ್ರೋಹಿಯಾಗಿ' ನೋಡುವ ಆತುರ: ಆರೋಪ

ಪಿಟಿಐ
Published 27 ಜುಲೈ 2021, 11:37 IST
Last Updated 27 ಜುಲೈ 2021, 11:37 IST
ಆಯಿಷಾ ಸುಲ್ತಾನಾ
ಆಯಿಷಾ ಸುಲ್ತಾನಾ   

ಕೊಚ್ಚಿ: ನಟಿ, ನಿರ್ಮಾಪಕಿ ಆಯಿಷಾ ಸುಲ್ತಾನಾ ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಗಳ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಲಕ್ಷದ್ವೀಪ ಆಡಳಿತ ಕೇರಳ ಹೈಕೋರ್ಟ್‌ನಲ್ಲಿ ಮಾಡಿದ ಆರೋಪವನ್ನು, ಆಯಿಷಾ ಪರ ವಕೀಲರು ನಿರಾಕರಿಸಿದ್ದಾರೆ.

‘ಲಕ್ಷದ್ವೀಪ ಆಡಳಿತವು, ಆಯಿಷಾ ಅವರನ್ನು ‘ದೇಶ ದ್ರೋಹಿ‘ಯಾಗಿ ನೋಡಬೇಕೆಂಬ ಆತುರದಲ್ಲಿದೆ‘ ಎಂದು ಆಯಿಷಾ ಪರ ವಕೀಲ ಕೆ.ಎ. ಅಕ್ಬರ್‌ ಆರೋಪಿಸಿದ್ದಾರೆ.

‘ಆಯಿಷಾ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಪ್ರಕರಣ ದಾಖಲಿಸಿದ ನಂತರ, ತನ್ನ ಮೊಬೈಲ್‌ ಫೋನ್‌ನಿಂದ ಎಲ್ಲ ವಿವರಗಳನ್ನು ಅಳಿಸಿ ಹಾಕಿದ್ದಾರೆ ಮತ್ತು ಪೊಲೀಸರು ಕೋರಿದ ದಾಖಲೆಗಳನ್ನು ನೀಡಲು ನಿರಾಕರಿಸಿದ್ದಾರೆ‘ ಎಂದು ಲಕ್ಷದ್ವೀಪ ಸರ್ಕಾರ ನ್ಯಾಯಾಲಯದಲ್ಲಿ ಆರೋಪಿಸಿತು.

ADVERTISEMENT

ಸರ್ಕಾರದ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯಿಷಾ ಪರ ವಕೀಲ ಅಕ್ಬರ್, ‘ತನ್ನ ಕಕ್ಷಿದಾರರು, ಫೋನ್‌ನಿಂದ ಯಾವುದೇ ವಿಷಯವನ್ನು ಅಳಿಸಿಲ್ಲ. ಪ್ರಕರಣ ದಾಖಲಾದ ದಿನವೇ ಪೊಲೀಸರು ಯಾವುದೇ ಪೂರ್ವ ಮಾಹಿತಿ ಅಥವಾ ನಿರ್ದೇಶನವಿಲ್ಲದೆ ಆ ಫೋನ್ ವಶಪಡಿಸಿಕೊಂಡಿದ್ದಾರೆ‘ ಎಂದು ಹೇಳಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 25ರಂದು ವಶಪಡಿಸಿಕೊಂಡಿರುವ ಆಯಿಷಾ ಅವರ ಫೋನ್ ಮತ್ತು ಅವರ ಸಹೋದರನ ಲ್ಯಾಪ್‌ಟಾಪ್‌ ಅನ್ನು ಜುಲೈ 15ರವರೆಗೆ ವಿಚಾರಣಾ ನ್ಯಾಯಾಲಯದಲ್ಲಿ ಹಾಜರುಪಡಿಸಿಲ್ಲ. ಇವು ಯಾರ ವಶದಲ್ಲಿವೆ ಎಂದು ನಮ್ಮ ಕಕ್ಷಿದಾರರಿಗೆ ತಿಳಿದಿಲ್ಲ‘ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.