
ತೇಜ್ ಪ್ರತಾಪ್ ಯಾದವ್
ಪಿಟಿಐ
ಪಟ್ನಾ: ‘ನನಗೆ ಜೀವ ಬೆದರಿಕೆ ಇದೆ. ಶತ್ರುಗಳು ನನ್ನನ್ನು ಸಾಯಿಸಬಹುದು’ ಎಂದು ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಅವರ ಹಿರಿಯ ಪುತ್ರ, ಜನಶಕ್ತಿ ಜನತಾ ದಳದ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಭಾನುವಾರ ಹೇಳಿದ್ದಾರೆ.
ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡ ಬೆನ್ನಲ್ಲೇ, ತೇಜ್ ಪ್ರತಾಪ್ ಅವರನ್ನು ಮೇ 25ರಂದು ಆರ್‌ಜೆಡಿಯಿಂದ ಹೊರಗೆ ಹಾಕಲಾಗಿತ್ತು. ಅದರ ಬೆನ್ನಲ್ಲೇ, ಅವರು ಹೊಸ ಪಕ್ಷ ಸ್ಥಾಪಿಸಿ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹುವಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
‘ಜೀವ ಬೆದರಿಕೆ ಇರುವುದರಿಂದ ಭದ್ರತೆ ಹೆಚ್ಚಿಸಿಕೊಂಡಿದ್ದೇನೆ’ ಎಂದು ಅವರು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆದರೆ, ತಮ್ಮ ಶತ್ರುಗಳು ಯಾರು ಎನ್ನುವುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ತಮ್ಮ ಕಿರಿಯ ಸಹೋದರ ತೇಜಸ್ವಿ ಯಾದವ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿರುವ ತೇಜ್ ಪ್ರತಾಪ್ ಯಾದವ್, ‘ಅವನಿಗೆ ನನ್ನ ಆರ್ಶೀವಾದ ಯಾವಾಗಲೂ ಇದೆ. ಆತ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಹಾರೈಸಿದ್ದಾರೆ. ಪಕ್ಷದಿಂದ ಹೊರಹಾಕಿದ ಸಂದರ್ಭದಲ್ಲಿ, ‘ನನ್ನ ಮತ್ತು ನನ್ನ ಕಿರಿಯ ಸಹೋದರನ ನಡುವೆ ಬಿರುಕು ಮೂಡಿಸಲು ಪಿತೂರಿ ನಡೆದಿದೆ’ ಎಂದು ತೇಜ್ ಪ್ರತಾಪ್ ಆರೋಪಿಸಿದ್ದರು.
ಈ ಹಿಂದೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಲಾಲೂ, ‘ನನ್ನ ಹಿರಿಯ ಪುತ್ರ ತೇಜ್ ಪ್ರತಾಪ್‌ನ ಕಾರ್ಯಚಟುವಟಿಕೆಗಳು ನಮ್ಮ ಕುಟುಂಬದ ಘನತೆಗೆ, ಪರಂಪರೆಗೆ ತಕ್ಕುದಾಗಿಲ್ಲ. ಆತನ ಬೇಜವಾಬ್ದಾರಿಯುತ ವರ್ತನೆಯಿಂದಾಗಿ ಅವನನ್ನು ಪಕ್ಷ ಹಾಗೂ ಕುಟುಂಬದಿಂದ ಉಚ್ಚಾಟಿಸುತ್ತಿದ್ದೇನೆ. ಇನ್ನು ಮುಂದೆ ಪಕ್ಷಕ್ಕಾಗಲಿ, ಕುಟುಂಬಕ್ಕಾಗಲಿ ಆತ ಸಂಬಂಧಿಸಿದವನಲ್ಲ. ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.
‘ಮಹಿಳೆಯೊಬ್ಬರ ಜತೆಗೆ ನಾನು ಸಂಬಂಧ ಹೊಂದಿದ್ದೇನೆ’ ಎಂದು ತೇಜ್ ಪ್ರತಾಪ್ ಫೇಸ್ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ತನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದೂ ಹೇಳಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ತೇಜ್ ಅವರನ್ನು ಲಾಲೂ ಉಚ್ಚಾಟನೆ ಮಾಡಿದ್ದರು.