
ಕಾನ್ಪುರದ ಗ್ವಾಲ್ಟೋಲಿ ಪ್ರದೇಶದ ವಿಐಪಿ ರಸ್ತೆಯಲ್ಲಿ ಪಾದಚಾರಿಗಳು ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದ ಲ್ಯಾಂಬೊರ್ಗಿನಿ ಕಾರು
–ಪಿಟಿಐ ಚಿತ್ರ
ಕಾನ್ಪುರ: ಇಲ್ಲಿನ ಗ್ವಾಲ್ಟೋಲಿ ಪ್ರದೇಶದ ವಿಐಪಿ ರಸ್ತೆಯಲ್ಲಿ ತಂಬಾಕು ಉದ್ಯಮಿಯೊಬ್ಬರ ಮಗ ಚಾಲನೆ ಮಾಡುತ್ತಿದ್ದ ಲ್ಯಾಂಬೊರ್ಗಿನಿ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡಿದ್ದಾರೆ.
ಬಂಶಿಧರ್ ಎಕ್ಸ್‌ಪೋರ್ಟ್ಸ್ ಪ್ರೈವೆಟ್ ಲಿಮಿಟೆಡ್‌ನ ಮಾಲೀಕ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರು ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಆದರೆ, ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ. ಅವರ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೆವ್–3 ಮಾಲ್ ಬಳಿ ಭಾನುವಾರ ಮಧ್ಯಾಹ್ನ 3.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಐಷಾರಾಮಿ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಿಂತಿದ್ದ ಪಾದಚಾರಿಗಳು ಮತ್ತು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
‘ಕಾರು ಮೊದಲು ಆಟೊಗೆ ಡಿಕ್ಕಿ ಹೊಡೆದ ನಂತರ, ನಿಂತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಈ ರಭಸಕ್ಕೆ ಸವಾರ, ಚಮನ್‌ಗಂಜ್ ನಿವಾಸಿ ತೌಫಿಕ್ ಎಂಬುವರು ಸುಮಾರು 10 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ಕಾರು ಬೈಕನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ಅಪರಿಚಿತ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ, ಯಾರನ್ನೂ ಬಂಧಿಸಿಲ್ಲ. ಲ್ಯಾಂಬೊರ್ಗಿನಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದೆ’ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಅತುಲ್ ಕುಮಾರ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
‘ಘಟನೆ ನಡೆದಾಗ ಚಾಲಕ ಮದ್ಯ ಸೇವಿಸಿದ್ದನೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಪಿ, ‘ತನಿಖೆ ಪೂರ್ಣಗೊಂಡ ನಂತರ ಅದು ತಿಳಿಯುತ್ತದೆ’ ಎಂದು ಹೇಳಿದ್ದಾರೆ.
‘ಗಾಯಾಳು ತೌಫಿಕ್ ನೀಡಿದ ದೂರಿನ ಆಧಾರದ ಮೇಲೆ, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಗ್ವಾಲ್ಟೋಲಿ ಠಾಣೆಯ ಅಧಿಕಾರಿ ಸಂತೋಷ್ ಗೌರ್ ತಿಳಿಸಿದ್ದಾರೆ.
ಲ್ಯಾಂಬೊರ್ಗಿನಿ ರೆವೆಲ್ಟೊದ ಆನ್–ರೋಡ್ ಬೆಲೆ ₹10 ಕೋಟಿಗಿಂತ ಹೆಚ್ಚು.
‘ರಾಜಿ ಮಾಡಿಕೊಳ್ಳುವಂತೆ ಒತ್ತಡ’
‘ಪೊಲೀಸ್ ಠಾಣೆಯಲ್ಲಿ ಆರೋಪಿಯ ಸಹಚರರು ಅನುಚಿತವಾಗಿ ವರ್ತಿಸಿದರು’ ಎಂದು ಸಂತ್ರಸ್ತರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ‘ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಆರೋಪಿ ಪ್ರಭಾವಿ ವ್ಯಕ್ತಿ ಎಂಬ ಕಾರಣಕ್ಕಾಗಿ ಪೊಲೀಸರು ಸಹ ಮೃದು ಧೋರಣೆ ಹೊಂದಿದ್ದಾರೆ’ ಎಂದು ಕೆಲವರು ಆರೋಪ ಮಾಡಿದ್ದಾರೆ.
2024ರಲ್ಲಿ ಐ.ಟಿ ದಾಳಿ
ಕೆ.ಕೆ. ಮಿಶ್ರಾ ಕುಟುಂಬದವರು 2024ರ ಮಾರ್ಚ್‌ನಲ್ಲಿ ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಟ್ಟಿದ್ದರು. ಅಧಿಕಾರಿಗಳು ದೆಹಲಿ ಮತ್ತು ಕಾನ್ಪುರದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ, ಐಷಾರಾಮಿ ವಾಹನಗಳು ಹಾಗೂ ಸುಮಾರು ₹4.5 ಕೋಟಿ ನಗದನ್ನು ಪತ್ತೆ ಮಾಡಿದ್ದರು. ವಶಪಡಿಸಿಕೊಂಡ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಮೆಕ್ಲಾರೆನ್, ಪೋರ್ಷೆ ಮತ್ತು ಭಾನುವಾರ ಅಪಘಾತವಾದ ಕಪ್ಪು ಬಣ್ಣದ ಲ್ಯಾಂಬೊರ್ಗಿನಿ ರೆವೆಲ್ಟೊ ಸೇರಿದ್ದವು. ಈ ಹೆಚ್ಚಿನ ಕಾರುಗಳು ‘4018’ ಎಂಬ ವಿಶಿಷ್ಟ ನೋಂದಣಿ ಸಂಖ್ಯೆಯನ್ನು ಹೊಂದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.