ನಿರ್ಮಲಾ ಸೀತಾರಾಮನ್
(ಪಿಟಿಐ ಚಿತ್ರ)
ನವದೆಹಲಿ: 'ನನ್ನ ರಾಜ್ಯದಲ್ಲಿ (ತಮಿಳುನಾಡು) ಹಿಂದಿ ಕಲಿಕೆ ಅಪರಾಧ ಎಂದೇ ಭಾವಿಸಲಾಗಿತ್ತು. ನನ್ನನ್ನು ಗೇಲಿ ಮಾಡಲಾಗುತ್ತಿತ್ತು' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬ್ಯಾಂಕಿಂಗ್ ಕಾಯ್ದೆಗಳ (ತಿದ್ದುಪಡಿ) ಮಸೂದೆಯ ಮಂಡನೆಯ ವೇಳೆ ಈ ಕುರಿತು ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
ವಿರೋಧ ಪಕ್ಷದ ಸದಸ್ಯರೊಬ್ಬರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಿರ್ಮಲಾ, 'ನಾನು ಎಲ್ಲಿಂದ (ತಮಿಳುನಾಡು) ಬಂದಿದ್ದೇನೆಯೋ ಅಲ್ಲಿ ಹಿಂದಿ ಕಲಿಕೆ ಅಪರಾಧ ಎಂದೇ ಭಾವಿಸಲಾಗುತ್ತದೆ. ಅವರು ಹಿಂದಿ ಕಲಿಕೆಯನ್ನು ವಿರೋಧಿಸುತ್ತಾರೆ. ನನ್ನ ಹಿಂದಿ ಕಲಿಕೆಯನ್ನು ಗೇಲಿ ಮಾಡಲಾಗುತ್ತಿತ್ತು' ಎಂದು ಹೇಳಿದ್ದಾರೆ.
'ನನ್ನ ಹಿಂದಿ ಭಾಷೆಯಲ್ಲಿ ತಪ್ಪಿದ್ದರೆ ಸರಿಪಡಿಸಬಹುದು, ಗೇಲಿ ಮಾಡಬಹುದು. ಏಕೆಂದರೆ ನಾನು ಅಂತಹ ರಾಜ್ಯದಿಂದ ಬಂದಿದ್ದೇನೆ. ಅಲ್ಲಿ ಹಿಂದಿ ಕಲಿಕೆ ಅಪರಾಧ ಎಂದೇ ಭಾವಿಸಲಾಗುತ್ತದೆ. ಇದರಿಂದ ಚಿಕ್ಕವಳಿಂದಲೇ ನನ್ನ ಹಿಂದಿ ಕಲಿಕೆಯನ್ನು ವಿರೋಧಿಸಲಾಗಿತ್ತು' ಎಂದು ಹೇಳಿದ್ದಾರೆ.
ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ತಮಿಳು ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಆಯಾ ರಾಜ್ಯಗಳಲ್ಲಿ ಉತ್ತೇಜಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
'ತಮಿಳು ಭಾಷೆಯನ್ನು ವಿಶ್ವಸಂಸ್ಥೆಯತ್ತ ಕೊಂಡೊಯ್ದ ಓರ್ವ ಪ್ರಧಾನಿಯನ್ನು ಹೆಸರಿಸಿ ನೋಡೋಣ? ಆದರೆ ಪ್ರಧಾನಿ ಮೋದಿ ಅವರಿಂದ ಸಾಧ್ಯವಾಯಿತು. ಅವರು ತಮಿಳು ಭಾಷೆಯನ್ನು ಅಷ್ಟೊಂದು ಗೌರವಿಸುತ್ತಾರೆ. ಸಂಸತ್ ಭಾಷಣದಲ್ಲೂ ಪ್ರಧಾನಿ ತಮಿಳು ಭಾಷೆಯನ್ನು ಪ್ರಸ್ತಾಪಿಸಿದ್ದಾರೆ. ಇವೆಲ್ಲವೂ ತಮಿಳು ಭಾಷೆ ಮೇಲಿನ ಪ್ರೀತಿಯಾಗಿದೆ' ಎಂದು ಅವರು ಹೇಳಿದ್ದಾರೆ.
ನಿರ್ಮಲಾ ಹೇಳಿಕೆಗೆ ತಿರುಗೇಟು ನೀಡಿರುವ ಡಿಎಂಕೆ ನಾಯಕಿ ಕೆ.ಕನಿಮೋಳಿ, 'ತಮಿಳುನಾಡಿನಲ್ಲಿ ಭಾಷೆ ಕಲಿಯದಂತೆ ಯಾರನ್ನೂ ತಡೆದಿಲ್ಲ. ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸಿದ್ದೆವು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.