ADVERTISEMENT

ನಿತ್ಯ ಎದ್ದ ಕೂಡಲೇ ಲತಾ ಭಾವಚಿತ್ರ ನೋಡಿ ಸ್ಫೂರ್ತಿ ಪಡೆಯುತ್ತಿದ್ದೆವು: ರೆಹಮಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2022, 10:46 IST
Last Updated 6 ಫೆಬ್ರುವರಿ 2022, 10:46 IST
   

ಚೆನ್ನೈ: ಲತಾ ಮಂಗೇಶ್ಕರ್‌ ಅವರು ಭಾರತೀಯ ಸಂಗೀತ ಮತ್ತು ಕಾವ್ಯದ ಭಾಗ ಎಂದು ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಕೊಂಡಾಡಿದ್ದಾರೆ. ಅಲ್ಲದೆ, ಅವರು ತಮಗೆ ಸ್ಫೂರ್ತಿದಾಯಕರಾಗಿದ್ದರು ಎಂದೂ ಅವರು ತಿಳಿಸಿದ್ದಾರೆ.

ಸಂಗೀತ ಕ್ಷೇತ್ರದ ಮೇರು ಪ್ರತಿಭೆ ಲತಾ ಮಂಗೇಶ್ಕರ್‌ ಅವರು ಭಾನುವಾರ ನಿಧನರಾದರು. ಇದರ ಹಿನ್ನೆಲೆಯಲ್ಲಿ ಮಾತನಾಡಿರುವ ರೆಹಮಾನ್‌ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

'ಇದು ನಮಗೆ ದುಃಖದ ದಿನ. ಲತಾ ಅವರಂತಹವರು ಸಂಗೀತ ಕ್ಷೇತ್ರದ ಮೇರು ವ್ಯಕ್ತಿತ್ವ ಮಾತ್ರವಲ್ಲ, ಅವರು, ಭಾರತೀಯ ಸಂಗೀತ ಮತ್ತು ಕಾವ್ಯದ ಭಾಗ. ಈ ಶೂನ್ಯವು ಶಾಶ್ವತವಾಗಿ ಉಳಿಯಲಿದೆ. ನನ್ನ ತಂದೆ ನಿತ್ಯ ಬೆಳಗ್ಗೆ ಎದ್ದ ಕೂಡಲೇ ಲತಾ ಮಂಗೇಶ್ವರ್‌ ಅವರ ಚಿತ್ರವನ್ನು ನೋಡುತ್ತಿದ್ದರು. ಪ್ರತಿದಿನ ರೆಕಾರ್ಡಿಂಗ್‌ಗೆ ಹೋಗುವ ಮುನ್ನ ಅವರು ಲತಾ ಅವರ ಚಿತ್ರ ನೋಡಿ ಸ್ಫೂರ್ತಿ ಪಡೆಯುತ್ತಿದ್ದರು. ಅದು ಹಾಗೇ ಮುಂದುವರಿಯಿತು. ಅವರ ಕೆಲವು ಹಾಡುಗಳನ್ನು ಸಂಯೋಜಿಸಿದ, ಅವರೊಂದಿಗೆ ಕೆಲ ಹಾಡುಗಳನ್ನು ಹಾಡಿದ ನಾನು ಅದೃಷ್ಟಶಾಲಿ' ಎಂದು ರೆಹಮಾನ್‌ ಹೇಳಿದ್ದಾರೆ.

ADVERTISEMENT

ರೆಹಮಾನ್‌ ಅವರ ತಂದೆ ಆರ್ ಕೆ ಶೇಖರ್ ಸಂಗೀತ ಸಂಯೋಜಕರಾಗಿದ್ದರು.

ರೆಹಮಾನ್‌ ಅವರು ರಾಗ ಸಂಯೋಜನೆ ಮಾಡಿದ್ದ 'ದಿಲ್ ಸೆ' ಚಿತ್ರದ "ಜಿಯಾ ಜಲೆ" ಮತ್ತು 'ರಂಗ್ ದೇ ಬಸಂತಿ' ಚಿತ್ರದ "ಲುಕಾ ಚುಪ್ಪಿ" ಸೇರಿದಂತೆ ಹಲವು ಹಾಡುಗಳನ್ನು ಲತಾ ಅವರು ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.