ADVERTISEMENT

ರಜೌರಿ: ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ರಜೆ ರದ್ದು

ಪಿಟಿಐ
Published 25 ಜನವರಿ 2025, 13:34 IST
Last Updated 25 ಜನವರಿ 2025, 13:34 IST
<div class="paragraphs"><p>ಕಾಯಿಲೆಗೆ ತುತ್ತಾದವರ ಜೊತೆ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿ ಇರಿಸಿರುವ ಕಟ್ಟಡಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ </p></div>

ಕಾಯಿಲೆಗೆ ತುತ್ತಾದವರ ಜೊತೆ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿ ಇರಿಸಿರುವ ಕಟ್ಟಡಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ

   

–ಪಿಟಿಐ ಚಿತ್ರ

ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಬಧಾಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಯೊಂದಕ್ಕೆ ತುತ್ತಾಗಿ 17 ಮಂದಿ ಮೃತಪಟ್ಟಿರುವ ಕಾರಣ ಕಟ್ಟೆಚ್ಚರದಿಂದ ಇರುವಂತೆ ಸೂಚನೆ ಬಂದಿರುವುದರಿಂದ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯ ಎಲ್ಲ ರಜೆಗಳನ್ನು ಅಧಿಕಾರಿಗಳು ರದ್ದುಪಡಿಸಿದ್ದಾರೆ. ಈ ಗ್ರಾಮದಲ್ಲಿ 230 ಮಂದಿಯನ್ನು ಬೇರೆಯವರ ಸಂಪರ್ಕದಿಂದ ಪ್ರತ್ಯೇಕವಾಗಿ ಇರಿಸಲಾಗಿದೆ.

ADVERTISEMENT

ಲಖನೌ ಪ್ರಯೋಗಾಲಯದ ಆರಂಭಿಕ ತನಿಖೆಯ ಪ್ರಕಾರ ಈ ಗ್ರಾಮದಲ್ಲಿ ಜನರ ಸಾವಿಗೆ ವೈರಾಣು, ಬ್ಯಾಕ್ಟೀರಿಯಾ ಅಥವಾ ಸೋಂಕು ಕಾರಣವಲ್ಲ, ವಿಷಕಾರಿ ಪದಾರ್ಥದ ಕಾರಣದಿಂದಾಗಿ ಸಾವು ಉಂಟಾಗಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ವಿಷಕಾರಿ ಪದಾರ್ಥ ಯಾವುದು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಶೀಘ್ರವೇ ಪರಿಹಾರ ಸಿಗಬಹುದು ಎಂಬ ನಂಬಿಕೆ ಇದೆ. ಕಿಡಿಗೇಡಿತನದ ಕೃತ್ಯವೇನಾದರೂ ಆಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಸಚಿವ ಸಿಂಗ್ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಜೌರಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಅಮರಜೀತ್ ಸಿಂಗ್ ಭಾಟಿಯಾ, ‘ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸಲಾಗಿದೆ’ ಎಂಬ ವಿಷಯ ತಿಳಿಸಿದರು.

‘ಚಳಿಗಾಲದ ರಜೆಯನ್ನು ಕೂಡ ರದ್ದುಪ‍ಡಿಸಲಾಗಿದೆ’ ಎಂದು ಅವರು ಹೇಳಿದರು. ವೈದ್ಯಕೀಯ ಕಾಲೇಜಿಗೆ ನೆರವಾಗುವ ಉದ್ದೇಶದಿಂದ ಸರ್ಕಾರವು 10 ಮಂದಿ ಹೆಚ್ಚುವರಿ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜಿಸಿದೆ ಎಂದರು.

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ. ಮೂವರು ಸಹೋದರಿಯರು ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಮೂವರನ್ನು ವಿಮಾನದ ಮೂಲಕ ಜಮ್ಮುವಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರ ಹತ್ತಿರದ ಸಂಬಂಧಿಗಳನ್ನು ರಜೌರಿಯಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಕಾಯಿಲೆಗೆ ತುತ್ತಾದ ಕುಟುಂಬಗಳ ಸಂಪರ್ಕದಲ್ಲಿದ್ದ ಹಲವರನ್ನು ಗುರುತಿಸಲಾಗಿದೆ ಎಂದು ಕೂಡ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.