ADVERTISEMENT

ನನಗೆ ಎಲ್ಲಿಯೂ ಸುರಕ್ಷಿತೆ ಎಂಬ ಭಾವನೆ ಮೂಡುತ್ತಿಲ್ಲ: ಲೀನಾ ಮಣಿಮೇಕಲೈ

ಪಿಟಿಐ
Published 7 ಜುಲೈ 2022, 11:58 IST
Last Updated 7 ಜುಲೈ 2022, 11:58 IST
ನಿರ್ದೇಶಕಿ ಮಣಮೇಕಲೈ
ನಿರ್ದೇಶಕಿ ಮಣಮೇಕಲೈ   

ಚೆನ್ನೈ: ಈ ಸಮಯದಲ್ಲಿ ನನಗೆ ಎಲ್ಲಿಯೂ ಸುರಕ್ಷಿತ ಎಂಬ ಭಾವನೆ ಮೂಡುತ್ತಿಲ್ಲ ಎಂದು ಕಾಳಿ ಸಾಕ್ಷ್ಯಚಿತ್ರದ ನಿರ್ದೇಶಕಿ, ನಟಿ ಲೀನಾ ಮಣಿಮೇಕಲೈ ಹೇಳಿದ್ದಾರೆ.

ಕಾಳಿ ಮಾತೆಯು ಎಲ್‌ಜಿಬಿಟಿಕ್ಯೂ ಧ್ವಜ ಹಿಡಿದು ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸಲಾದ ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಕುರಿತಂತೆ ಎದುರಾಗುತ್ತಿರುವ ಪ್ರತಿರೋಧಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇಡೀ ದೇಶವು ಅತಿ ದೊಡ್ಡ ಪ್ರಜಾಪ್ರಭುತ್ವದಿಂದ ಅತಿ ದೊಡ್ಡ ದ್ವೇಷದ ಯಂತ್ರವಾಗಿ ಹದಗೆಟ್ಟಿದೆಯೇನೋ ಎಂದು ಭಾಸವಾಗುತ್ತಿದೆ. ಈಗ ನನಗೆ ಎಲ್ಲಿಯೂ ಸುರಕ್ಷತೆಯ ಭಾವನೆ ಮೂಡುತ್ತಿಲ್ಲ’ ಎಂದು ಬ್ರಿಟಿಷ್ ಸುದ್ದಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

ಕಳೆದ ವಾರ ವಿವಾದ ಆರಂಭವಾದಾಗಿನಿಂದ ನಮ್ಮ ಕುಟುಂಬ ಮತ್ತು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಇತರರಿಗೆ ಆನ್‌ಲೈನ್‌ನ 2,00,000ಕ್ಕೂ ಹೆಚ್ಚು ಖಾತೆಗಳಿಂದ ಬೆದರಿಕೆ ಸಂದೇಶಗಳು ಬಂದಿವೆ ಎಂದು ಅವರು ಹೇಳಿದ್ದಾರೆ..

ಬಲಪಂಥೀಯ ಹಿಂದೂ ಸಂಘಟನೆಗಳು ಆನ್‌ಲೈನ್‌ನಲ್ಲಿ ನಡೆಸುತ್ತಿರುವ ದಾಳಿಯು ‘ದೊಡ್ಡ ಮಟ್ಟದ ಸಾಮೂಹಿಕ ಹತ್ಯೆ’ ಎಂದು ಟೊರಂಟೊ ಮೂಲದ ನಿರ್ದೇಶಕಿ ಹೇಳಿದ್ದಾರೆ.

ಗಾರ್ಡಿಯನ್ ಸಂದರ್ಶನದಲ್ಲಿ, ಹಿಂದೂ ಧರ್ಮ ಅಥವಾ ದೇವತೆಗೆ ಅಗೌರವ ತೋರಿದ್ದಾರೆನ್ನಲಾದ ಆರೋಪಗಳನ್ನು ಅಲ್ಲಗಳೆದಿರುವ ಮಣಿಮೇಕಲೈ, ತಮಿಳುನಾಡಿನ ಹಿಂದೂ ಕುಟುಂಬದಲ್ಲಿ ಬೆಳೆದ ನಾನು ಈಗ ನಾಸ್ತಿಕಳಾಗಲು ಸಾಧ್ಯವೇ ಎಂದು ಹೇಳಿದ್ದಾರೆ.

‘ನಾನು ಹುಟ್ಟಿ ಬೆಳೆದಿರುವ ತಮಿಳುನಾಡಿನಲ್ಲಿ ಕಾಳಿಯನ್ನು ಕ್ಷುದ್ರ ದೇವತೆ ಎಂದು ಪೂಜಿಸಲಾಗುತ್ತದೆ. ಅವಳು ಆಡಿನ ರಕ್ತದಲ್ಲಿ ಬೇಯಿಸಿದ ಮಾಂಸವನ್ನು ತಿನ್ನುತ್ತಾಳೆ, ಮದ್ಯ ಸ್ವೀಕರಿಸುತ್ತಾಳೆ. ಬೀಡಿ (ಸಿಗರೇಟ್) ಸೇದುತ್ತಾಳೆ ಮತ್ತು ಕಾಡು ನೃತ್ಯ ಮಾಡುತ್ತಾಳೆ.ಅದೇ ಕಾಳಿಯನ್ನು ನನ್ ಚಲನಚಿತ್ರದಲ್ಲಿ ನಾನು ಚಿತ್ರದಲ್ಲಿ ತೋರಿಸುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.

‘ಈ ಟ್ರೋಲ್‌ಗಳಿಗೆ ಧರ್ಮ ಅಥವಾ ನಂಬಿಕೆಗೆ ಯಾವುದೇ ಸಂಬಂಧವಿಲ್ಲ’ ಎಂದು ಅವರು ಹೇಳಿದರು.

ಕಾಳಿ ಪೋಸ್ಟರ್‌ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಮಣಿಮೇಕಲೈ ವಿರುದ್ಧ ಬುಧವಾರ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಎರಡು ಎಫ್‌ಐಆರ್ ದಾಖಲಾಗಿವೆ. ಭೋಪಾಲ್ ಮತ್ತು ರತ್ಲಾಮ್‌ನಲ್ಲಿಯೂ ಎರಡು ಎಫ್‌ಐಆರ್ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.