ADVERTISEMENT

ಹಕ್ಕುಗಳನ್ನು ಮರಳಿ ಪಡೆಯಲು ಕಾಶ್ಮೀರದ ಜನರು ರೈತರಂತೆ ತ್ಯಾಗ ಮಾಡಬೇಕಿದೆ: ಫಾರೂಕ್

ಪಿಟಿಐ
Published 5 ಡಿಸೆಂಬರ್ 2021, 12:49 IST
Last Updated 5 ಡಿಸೆಂಬರ್ 2021, 12:49 IST
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ   

ಶ್ರೀನಗರ: ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಜಮ್ಮು–ಕಾಶ್ಮೀರದ ಜನರು ರೈತರಂತೆ ತ್ಯಾಗ ಮಾಡಬೇಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌‍ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ.

2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಫಾರೂಕ್, 'ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ರೈತರು ಪ್ರತಿಭಟಿಸಿದಂತೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರಳಿ ಸ್ಥಾಪಿಸಲು ತ್ಯಾಗ ಮಾಡಬೇಕಾಗಬಹುದು' ಎಂದು ಹೇಳಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ 116ನೇ ಜನ್ಮ ದಿನಾಚರಣೆಯಲ್ಲಿ ಪಕ್ಷದ ಯುವ ಘಟಕವನ್ನು ಉದ್ದೇಶಿಸಿ ಮಾತನಾಡಿದ ಅವರು, '11 ತಿಂಗಳು ರೈತರು ಪ್ರತಿಭಟನೆ ನಡೆಸಿದರು. 700ಕ್ಕೂ ಹೆಚ್ಚು ರೈತರು ಮೃತಪಟ್ಟರು. ರೈತರು ತ್ಯಾಗ ಮಾಡಿದಾಗ ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಅದೇ ರೀತಿ ನಮ್ಮ ಹಕ್ಕುಗಳನ್ನು ಮರಳಿ ಪಡೆಯಲು ನಾವು ಕೂಡ ತ್ಯಾಗ ಮಾಡಲು ಸಿದ್ಧರಿರಬೇಕು' ಎಂದರು.

ADVERTISEMENT

'ಇದನ್ನು ನೆನಪಿಡಿ, ನಾವು 370, 35-ಎ ಮತ್ತು ರಾಜ್ಯ ಸ್ಥಾನಮಾನವನ್ನು ಮರಳಿ ಪಡೆಯುವ ಮಾತನ್ನು ಕೊಟ್ಟಿದ್ದೇವೆ.ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ. ಆದರೂ ನಮ್ಮ ಪಕ್ಷವು ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ' ಎಂದು ಹೇಳಿದರು.

ಕೇಂದ್ರ ಸರ್ಕಾರವು ಚಳಿಗಾಲದ ಸಂಸತ್ ಅಧಿವೇಶನದ ಮೊದಲ ದಿನವಾದ ನವೆಂಬರ್ 29ರಂದು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.