ADVERTISEMENT

ಗುಜರಾತ್‌: ಮನೆಯೊಳಗೆ ಬಂದು ಕುಳಿತ ಸಿಂಹಿಣಿ!

ಏಜೆನ್ಸೀಸ್
Published 12 ನವೆಂಬರ್ 2018, 14:27 IST
Last Updated 12 ನವೆಂಬರ್ 2018, 14:27 IST
   

ಅನಿರೀಕ್ಷಿತ ಅತಿಥಿಯಾಗಿ ಮನೆಯೊಳಗೆ ಕಾಡಿನ ರಾಜ ಸಿಂಹ ಬಂದು ಕುಳಿತರೆ? ಮನೆಯವರನ್ನೆಲ್ಲ ನೋಡುತ್ತ ದಂತಪಂಕ್ತಿಗಳನ್ನು ಬಿಟ್ಟು ಎಷ್ಟೇ ಮುದ್ದಾಗಿ ಕಣ್ಣೋಟ ಬೀರಿದರೂ ಸಮೀಪಕ್ಕೆ ಸರಿಯುವ ಸಾಹಸವನ್ನು ಮಾಡುವುದಾದರೂ ಯಾರು. ನಡುಗುವ ಕೈಗಳಲ್ಲಿ ಮೊಬೈಲ್‌ ಕ್ಯಾಮೆರಾ ತೆರೆದು ತಣ್ಣಗೆ ನಿಂತು ಅದರ ಗಾಂಭೀರ್ಯವನ್ನು ಸೆರೆಹಿಡಿಯುವುದಷ್ಟೇ...

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರ ಮನೆಯಲ್ಲಿ ಸಿಂಹಿಣಿವಾಸ್ತವ್ಯ ಹೂಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಗಿರ್‌ ಅರಣ್ಯ ಭಾಗದಿಂದ ಆಹಾರ ಹುಡುಕುತ್ತಾ ಇಲ್ಲಿನ ಹಳ್ಳಿಗಳತ್ತ ಆಗಾಗ್ಗೆ ಸಿಂಹಗಳ ಭೇಟಿ ಸಾಮಾನ್ಯ.

ವಿಡಿಯೊದಲ್ಲಿ ಕಾಣುವಂತೆ ಸಿಂಹಿಣಿಯೊಂದುಬೆಳೆಯ ರಾಶಿ ಮೇಲೆ ಕುಳಿತು ವಿಶ್ರಮಿಸುತ್ತಿದೆ. ಎತ್ತಲಿಂದಲೂ ಸಿಕ್ಕ ಬಿಳಿಯ ಬಣ್ಣದ ಚೀಲವನ್ನು ಹಿಡಿದು ಆಟವಾಡುವಂತೆ ಮುಖಭಾವ ತೋರುತ್ತಿದೆ. ಅತ್ತಿಂದಿತ್ತ–ಇತ್ತಿಂದತ್ತ ಕಣ್ಣಾಡಿಸುತ್ತ ತನ್ನ ಇರುವಿಕೆಯನ್ನು ಮನೆಯವರಿಗೆಲ್ಲ ತೋರುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT

ಸಿಂಹಿಣಿಯನ್ನು ಕಂಡಿರುವ ಮನೆಯವರು ಗಾಬರಿಯಾಗಿ, ಓಡಾಡುತ್ತಿರುವ ಸದ್ದು ಕೇಳಬಹುದು. ಆದರೆ, ಯಾವುದಕ್ಕೂಹೆದರದೆ ತನ್ನ ಪಾಡು ತಾನು ನಿರ್ಭೀತಿಯಿಂದ ಸಿಂಹಿಣಿ ಕುಳಿತಿದೆ. ಭಾನುವಾರ ರಾತ್ರಿ ಹಳ್ಳಿಯ ಕೃಷಿಕರೊಬ್ಬರ ಮನೆಯಲ್ಲಿ ಸಿಂಹಿಣಿ ಕಂಡು ಬಂದಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.