ADVERTISEMENT

ಬಿಹಾರ ಶಾಲೆಯಲ್ಲಿ ಮದ್ಯ ವಶ: ಸಚಿವರ ಸಹೋದರನ ಬಂಧನ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 13:53 IST
Last Updated 18 ಮಾರ್ಚ್ 2021, 13:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಮುಜಾಫರ್‌ಪುರ್‌ ಶಾಲೆಯಿಂದ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡ ಪ್ರಕರಣ ವಿಧಾನಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿತು. ಸಚಿವರ ಸಹೋದರರಾಗಿರುವ ಈ ಶಿಕ್ಷಣ ಸಂಸ್ಥೆಯ ಮಾಲೀಕರನ್ನು ಬಂಧಿಸುವ ಸಾಧ್ಯತೆ ಇದೆ.

ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌ ಅವರು ‘ಸಚಿವರ ಸಹೋದರನನ್ನು ಬಂಧಿಸಬೇಕು. ಎಲ್ಲರಿಗೂ ಕಾನೂನು ಒಂದೇ ಎಂಬುದನ್ನು ತೋರ್ಪಡಿಸಬೇಕು’ ಎಂದು ಆಗ್ರಹಿಸಿದರು.

ಬಿಹಾರದ ಕಂದಾಯ ಮತ್ತು ಭೂ ಸುಧಾರಣಾ ಸಚಿವ ರಾಮ್‌ ಸೂರತ್‌ ರಾಯ್‌ ಅವರ ಸಹೋದರ ಹನ್ಸಲಾಲ್‌ ರಾಯ್‌ ಈ ಶಿಕ್ಷಣ ಸಂಸ್ಥೆಯ ಮಾಲೀಕರಾಗಿದ್ದಾರೆ. ಟ್ರಕ್‌ ಹಾಗೂ ನಾಲ್ಕು ವ್ಯಾನ್‌ಗಳಲ್ಲಿ ತುಂಬಿದ್ದ 816 ಮದ್ಯದ ಪೆಟ್ಟಿಗೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

‘ತಮಗೂ ಹಾಗೂ ಸಹೋದರನಿಗೆ ಯಾವುದೇ ಸಂಬಂಧವಿಲ್ಲ. ಆತನೊಂದಿಗಿದ್ದ ಸಂಬಂಧಗಳನ್ನು ಕಡಿದುಕೊಂಡಿದ್ದೇನೆ. ಸಹೋದರ ಮಾಡಿದ ತಪ್ಪಿಗೆ ನಾನೇಕೆ ಶಿಕ್ಷೆ ಅನುಭವಿಸಬೇಕು. ತೇಜಸ್ವಿ ಅವರ ತಂದೆ ಮಾಡಿದ ತಪ್ಪಿಗೆ ಅವರಿಗೆ ದಂಡ ವಿಧಿಸಬೇಕೆ?’ ಎಂದು ಸಚಿವ ರಾಯ್‌ ತಮ್ಮನ್ನು ಸಮರ್ಥಿಸಿಕೊಂಡರು.

‘ಸಚಿವರ ಸಹೋದರನ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ಹನ್ಸಲಾಲ್‌ ಮತ್ತು ಇತರ 9 ಮಂದಿ ವಿರುದ್ಧ ಬಂಧನದ ವಾರಂಟ್‌ ಕೋರಿ ವಿಶೇಷ ಅಬಕಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ’ ಎಂದು ಹಿರಿಯ ಎಸ್‌ಪಿ ಜಯಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.