ADVERTISEMENT

'ಸಹಜೀವನ' ಅಪಾಯಕಾರಿ ಕಾಯಿಲೆ: ಬಿಜೆಪಿ ಸಂಸದ ಧರಂವೀರ್‌ ಸಿಂಗ್‌

ಪಿಟಿಐ
Published 7 ಡಿಸೆಂಬರ್ 2023, 15:16 IST
Last Updated 7 ಡಿಸೆಂಬರ್ 2023, 15:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ಸಹಜೀವನವನ್ನು ‘ಅಪಾಯಕಾರಿ ಕಾಯಿಲೆ’ ಎಂದು ಕರೆದಿರುವ ಹರಿಯಾಣದ ಬಿಜೆಪಿ ಸಂಸದ ಧರಂವೀರ್‌ ಸಿಂಗ್‌, ‘ಸಹಜೀವನ ಸಂಬಂಧವನ್ನು ಸಮಾಜದಿಂದ ತೊಲಗಿಸಬೇಕು’ ಎಂದು ಕರೆಕೊಟ್ಟಿದ್ದಾರೆ.

ಲೋಕಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಸಹಜೀವನ ಎಂಬ ಹೊಸ ಪಿಡುಗು ಸಮಾಜದಲ್ಲಿ ತಲೆಯೆತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿರುವ ಇಂತಹ ಸಂಬಂಧ ನಮ್ಮ ಸಮಾಜದಲ್ಲೂ ವೇಗವಾಗಿ ಪ್ರಚಾರ ಪಡೆಯುತ್ತಿದ್ದು, ಅದರ ಪರಿಣಾಮಗಳು ಭಯಾನಕವಾಗಿವೆ. ದೆಹಲಿಯಲ್ಲಿ ಆಫ್ತಾಬ್‌ ಪೂನಾವಾಲಾ ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್ ಅವರನ್ನು ಹತ್ಯೆ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಅಂತಹ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ’ ಎಂದು ಎಚ್ಚರಿಸಿದರು. 

‘ಸಹಜೀವನ ಸಂಬಂಧ ನಮ್ಮ ಸಮಾಜವನ್ನು ವಿನಾಶದತ್ತ ತಳ್ಳುವುದು ಮಾತ್ರವಲ್ಲದೆ, ದ್ವೇಷ ಹರಡುತ್ತಿದೆ. ಇದು ಮುಂದುವರಿಯಲು ಅವಕಾಶ ನೀಡಬಾರದು. ಸಹಜೀವನ ಸಂಬಂಧ ನಿಯಂತ್ರಿಸಲು ಕಾನೂನು ರೂಪಿಸುವಂತೆ ನಾನು ಸಚಿವರಲ್ಲಿ ಮನವಿ ಮಾಡುತ್ತೇನೆ’ ಎಂದು ಭಿವಾನಿ ಮಹೇಂದ್ರಗಢ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಹೇಳಿದರು. 

ADVERTISEMENT

‘ಪ್ರೀತಿಸಿ ಮದುವೆಯಾದವರಲ್ಲಿ ವಿಚ್ಛೇದನ ಪ್ರಮಾಣ ತುಂಬಾ ಹೆಚ್ಚಿದೆ. ಪ್ರೇಮ ವಿವಾಹದಿಂದಾಗಿ ಹಳ್ಳಿಗಳಲ್ಲಿ ಘರ್ಷಣೆ ಉಂಟಾಗುತ್ತಿದ್ದು, ಹಲವು ಕುಟುಂಬಗಳು ನಾಶವಾಗಿವೆ. ಆದ್ದರಿಂದ ಮದುವೆಗೆ ವಧು ಮತ್ತು ವರನ ಪೋಷಕರ ಒಪ್ಪಿಗೆಯನ್ನು ಕಡ್ಡಾಯ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.