ಪ್ರಯಾಗರಾಜ್ (ಉತ್ತರ ಪ್ರದೇಶ): ಸಹಜೀವನದಲ್ಲಿದ್ದು ನಾಲ್ಕು ವರ್ಷ ಒಪ್ಪಿತ ದೈಹಿಕ ಸಂಬಂಧ ಹೊಂದಿದ ಬಳಿಕ ಮದುವೆಯಾಗುವುದಕ್ಕೆ ಪುರುಷನೊಬ್ಬ ನಿರಾಕರಿಸಿದಲ್ಲಿ ಅದು ಗಂಭೀರ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
‘ಸರಿ– ತಪ್ಪುಗಳನ್ನು ನಿರ್ಧರಿಸಬಲ್ಲ ಸಾಮರ್ಥ್ಯವಿರುವ ವಯಸ್ಕರಿಬ್ಬರು ಹಲವು ವರ್ಷ ಸಹಜೀವನ ನಡೆಸುತ್ತಿದ್ದರೆ, ಅವರು ಅಂತಹ ಸಂಬಂಧವನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡಿಕೊಂಡಿರುತ್ತಾರೆ ಹಾಗೂ ಅದರಿಂದಾಗುವ ಪರಿಣಾಮಗಳ ಕುರಿತು ಅವರಿಗೆ ಅರಿವು ಇರುತ್ತದೆ ಎಂದೇ ಊಹಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಅರುಣಕುಮಾರ್ ಸಿಂಗ್ ದೇಶವಾಲ್ ಅವರು ಇದ್ದ ಪೀಠ ಹೇಳಿದೆ.
ಸಹಜೀವನ ಸಂಗಾತಿಯಾಗಿದ್ದ ಪುರುಷನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ವೇಳೆ, ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮದುವೆ ಮಾಡಿಕೊಳ್ಳುವ ಭರವಸೆ ಇದ್ದ ಕಾರಣವೇ ಒಪ್ಪಿತ ಸಂಬಂಧಕ್ಕೆ ಸಮ್ಮತಿಸಿದ್ದೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯ ಇಲ್ಲ’ ಎಂದು ಸೆಪ್ಟೆಂಬರ್ 8ರಂದು ಹೊರಡಿಸಿರುವ ಆದೇಶದಲ್ಲಿ ಪೀಠ ಹೇಳಿದೆ.
ಒಪ್ಪಿತ ಸಂಬಂಧದಲ್ಲಿದ್ದ ಪುರುಷನ ವಿರುದ್ಧ ತಾನು ನೀಡಿದ್ದ ದೂರನ್ನು ಮಹೋಬಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿ ಕಳೆದ ವರ್ಷ ಆಗಸ್ಟ್ 17ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.