ADVERTISEMENT

ಮತಯಂತ್ರ ವಿರುದ್ಧ ಕಾರ್ಯತಂತ್ರ: ಬಿಜೆಪಿ ವಿರೋಧಿಗಳ ಸಭೆ ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:16 IST
Last Updated 31 ಜನವರಿ 2019, 20:16 IST
   

ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ) ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಕಾರ್ಯತಂತ್ರ ರೂಪಿಸುವುದಕ್ಕಾಗಿ ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ಶುಕ್ರವಾರ ಸಂಜೆ ಸಭೆ ಸೇರಲಿದ್ದಾರೆ. ರಫೇಲ್‌ ಯುದ್ಧ ವಿಮಾನ ಒಪ್ಪಂದದಂತಹ ರಾಜಕೀಯ ವಿಚಾರಗಳೂ ಚರ್ಚೆ ಆಗಲಿವೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಾಂಗ್ರೆಸ್‌ ಮುಖಂಡರಾದ ಗುಲಾಂ ನಬಿ ಆಜಾದ್‌, ಅಹ್ಮದ್‌ ಪಟೇಲ್‌, ತೃಣಮೂಲ ಕಾಂಗ್ರೆಸ್‌ ಡೆರೆಕ್‌ ಒ ಬ್ರಯಾನ್‌, ಸಿಪಿಐನ ಡಿ.ರಾಜಾ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಮಧ್ಯಂತರ ಬಜೆಟ್‌ ಮಂಡನೆ ಪೂರ್ಣಗೊಂಡ ಬಳಿಕ ಸಂಸತ್‌ ಭವನ ಸಮೀಪದ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ನಡೆಯುವ ಸಭೆಯಲ್ಲಿ 20 ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಇವಿಎಂ ವಿರುದ್ಧ ಸಂಘಟಿತ ಹೋರಾಟದ ರೂಪುರೇಷೆ ನಿರ್ಧರಿಸಲು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತದಲ್ಲಿ ಇತ್ತೀಚೆಗೆ ನಡೆಸಿದ್ದ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ತೀರ್ಮಾನಿಸಲಾಗಿತ್ತು.

ADVERTISEMENT

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರ ನಿವಾಸದಲ್ಲಿ ಗುರುವಾರ ನಡೆದ ಸಭೆಯಲ್ಲಿ ಶುಕ್ರವಾರ ಸಭೆ ನಡೆಸಲ ನಿರ್ಧರಿಸಲಾಯಿತು.

ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಜತೆಯಾಗಿ ಇವಿಎಂ ವಿರುದ್ಧ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರ ಬರೆಯುವುದು ಒಂದು ಕಾರ್ಯತಂತ್ರ. ಕೋವಿಂದ್‌ ಅವರನ್ನು ಭೇಟಿಯಾಗಲು ಅನುಮತಿ ಪಡೆಯುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಆಗಲಿದೆ ಎನ್ನಲಾಗಿದೆ.

ಮೋದಿಗೆ ಯೆಚೂರಿ ತರಾಟೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಂದಾಗುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸುತ್ತಿರುವುದಕ್ಕೆ ಸಿಪಿಎಂ ಮುಖ್ಯಸ್ಥ ಸೀತಾರಾಂ ಯೆಚೂರಿ ಹರಿಹಾಯ್ದಿದ್ದಾರೆ.

ಮೋದಿ ಅವರು 42 ಪಕ್ಷಗಳ ಬೆಂಬಲದಿಂದ ಪ್ರಧಾನಿಯಾದವರು. ಈ ಪಕ್ಷಗಳಲ್ಲಿ ಹಲವು ಪರಸ್ಪರ ಮುಖ ನೋಡುತ್ತಿಲ್ಲ ಎಂದು ಯೆಚೂರಿ ಹೇಳಿದ್ದಾರೆ.

**

ಬಿಜೆಪಿ ಆಡಳಿತದ 16 ರಾಜ್ಯಗಳ ಪೈಕಿ ಯಾವುದರಲ್ಲಿಯೂ ಕೋಮು ಗಲಭೆಗಳಿಲ್ಲ. ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಪಕ್ಷಗಳ ಆಳ್ವಿಕೆ ಕೊನೆಯಾಗುವುದರೊಂದಿಗೆ ಕೋಮು ಸಂಘರ್ಷವೂ ಕೊನೆಯಾಯಿತು.

-ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.