ADVERTISEMENT

ರಫೆಲ್ ವಿಮಾನ ಖರೀದಿಯಲ್ಲಿ ಹಗರಣ: ರಾಹುಲ್‌ಗಾಂಧಿ ಆರೋಪ

‘ಕಣ್ಣಲ್ಲಿ ಕಣ್ಣಿಟ್ಟು ನೋಡಿ’ ಎಂದು ಪ್ರಧಾನಿಗೆ ರಾಹುಲ್ ಸವಾಲು

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 8:23 IST
Last Updated 20 ಜುಲೈ 2018, 8:23 IST
   

ನವದೆಹಲಿ:’ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಾಲಮನ್ನಾ ಮಾಡುವ ಪ್ರಧಾನಿಗೆ ರೈತರ ಸಾಲಮನ್ನಾ ಮಾಡಲು ಇಚ್ಛಾಶಕ್ತಿ ಇಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ಲೋಕಸಭೆ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿಮಾತನಾಡಿದ ರಾಹುಲ್, ‘ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ. ಇದಕ್ಕೆ ಪ್ರಧಾನಿ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಪಾದಿಸಿದರು.

ಮಾತಿನ ಆರಂಭದಲ್ಲಿ, ಟಿಡಿಪಿ ಸಂಸದರು ಮಂಡಿಸಿದಅವಿಶ್ವಾಸ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅದರಲ್ಲಿನ ವಿಷಯಗಳನ್ನು ಪ್ರಸ್ತಾಪಿಸಿದರು.

ADVERTISEMENT

ದೇಶದ ಪ್ರತಿ ವ್ಯಕ್ತಿಯ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಉದ್ಯೋಗ ಸೃಷ್ಟಿಯ ಬಗ್ಗೆ ಹೇಳಿದ್ದರು. ಅವ್ಯಾವುದನ್ನೂ ಮಾಡಲಿಲ್ಲ. ನೋಟ್‌ ಬ್ಯಾನ್‌ ಮಾಡಿದರು. ಇದು ಜನರಿಗೆ ಹೊರೆಯಾಯಿತು. ಪ್ರಧಾನಿ ಅವರು ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಬಡವರಿಗೆ ಪ್ರಧಾನಿ ಹೃದಯದಲ್ಲಿ ಸ್ಥಾನವಿಲ್ಲ. ಒಮ್ಮೆ ಬೋಂಡಾ ಮಾರಾಟ ಮಾಡಿ ಎನ್ನುತ್ತೀರಿ. ಬಡವರ ಹಣವನ್ನು ಕಸಿಯುತ್ತಿದ್ದೀರಿ ಎಂದು ದೂರಿದರು.

‘ಪ್ರಧಾನಿ ಹೊರಗೆ ಹೋಗುವುದಿಲ್ಲ’ ಎಂದು ಸದನದಲ್ಲಿ ಹೇಳಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಮರುಕ್ಷಣ, ‘ಇಲ್ಲ ಇಲ್ಲ... ಹೋಗುತ್ತಾರೆ ವಿದೇಶಗಳಿಗೆ ಹೋಗುತ್ತಾರೆ’ ಎಂದು ಯಡವಟ್ಟಿನ ಹೇಳಿಕೆ ನೀಡಿದರು. ಇದು ಸದನದಲ್ಲಿ ನಗೆಯುಕ್ಕಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.