ADVERTISEMENT

ಲೋಕಸಭೆಯಲ್ಲಿ ವಿಪಕ್ಷಗಳಿಂದ ಪ್ರತಿಭಟನೆ; ಕಲಾಪಕ್ಕೆ ಅಡ್ಡಿ

ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌: ಸಂಸದರಿಗೆ ಸ್ಪೀಕರ್ ಓಂ ಬಿರ್ಲಾ ಮನವಿ

ಪಿಟಿಐ
Published 21 ಡಿಸೆಂಬರ್ 2021, 14:39 IST
Last Updated 21 ಡಿಸೆಂಬರ್ 2021, 14:39 IST
ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಮಂಗಳವಾರ ಸ್ಪೀಕರ್‌ ಓಂ ಬಿರ್ಲಾ ಅವರ ಪೀಠದ ಮುಂದೆ ಪ್ರತಿಭಟಿಸಿದರು –ಪಿಟಿಐ ಚಿತ್ರ
ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಮಂಗಳವಾರ ಸ್ಪೀಕರ್‌ ಓಂ ಬಿರ್ಲಾ ಅವರ ಪೀಠದ ಮುಂದೆ ಪ್ರತಿಭಟಿಸಿದರು –ಪಿಟಿಐ ಚಿತ್ರ   

ನವದೆಹಲಿ: ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದ ಕಾರಣ, ಲೋಕಸಭೆ ಕಲಾಪಕ್ಕೆ ಅಡ್ಡಿಯುಂಟಾಯಿತು.

ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ, ಗದ್ದಲದ ನಡುವೆಯೇ ಎರಡು ಮಸೂದೆಗಳನ್ನು ಸರ್ಕಾರ ಮಂಡಿಸಿದರೂ, ಸುಗಮ ಕಲಾಪ ಸಾಧ್ಯವಾಗದ ಕಾರಣ, ಸದನವನ್ನು ಮುಂದೂಡಲಾಯಿತು.

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಸಂಬಂಧಿಸಿದ ಮಸೂದೆ, ಚಾರ್ಟರ್ಡ್‌ ಅಕೌಂಟಂಟ್ಸ್ ಕಾಯ್ದೆ, ಕಾಸ್ಟ್‌ ಆ್ಯಂಡ್‌ ವರ್ಕ್ಸ್ ಅಕೌಂಟಂಟ್ಸ್ ಕಾಯ್ದೆ ಹಾಗೂ ಕಂಪನಿ ಸೆಕ್ರೆಟರಿಗಳ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು.

ADVERTISEMENT

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಏರಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಸಮಗ್ರ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ವಿವಿಧ ವಿರೋಧ ಪಕ್ಷಗಳು ಪಟ್ಟು ಹಿಡಿದವು. ಈ ಬೇಡಿಕೆಗೆ ಒಪ್ಪಿದ ಸರ್ಕಾರ, ಎರಡೂ ಮಸೂದೆಗಳನ್ನು ಸಂಬಂಧಪಟ್ಟ ಸಂಸದೀಯ ಸ್ಥಾಯಿ ಸಮಿತಿಗಳಿಗೆ ಒಪ್ಪಿಸಿತು.

ತಮ್ಮ ಸ್ಥಾನಗಳಿಗೆ ತೆರಳುವಂತೆ ಸ್ಪೀಕರ್‌ ಅವರು ಪದೇಪದೇ ಮಾಡಿದ ಮನವಿಗೆ ವಿಪಕ್ಷಗಳ ಸದಸ್ಯರು ಕಿವಿಗೊಡದೇ, ಪ್ರತಿಭಟನೆ ಮುಂದುವರಿದರು. ಆಗ, ಸ್ಪೀಕರ್‌ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2ರ ವರೆಗೆ ಮುಂದೂಡಿದರು.

ಸದನ ಪುನಃ ಆರಂಭಗೊಂಡ ನಂತರ ಕಾಂಗ್ರೆಸ್‌, ಡಿಎಂಕೆ ಹಾಗೂ ಟಿಎಂಸಿ ಸೇರಿದಂತೆ ಕೆಲವು ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸಿದರು. ವಿವಿಧ ಘೋಷಣೆಗಳಿದ್ದ ಫಲಕಗಳೊಂದಿಗೆ ಸ್ಪೀಕರ್‌ ಪೀಠದ ಮುಂದೆ ಬಂದು ಪ್ರತಿಭಟನೆ ಮುಂದುವರಿಸಿದರು.

ಲಖೀಂಪುರ ಖೇರಿ ಘಟನೆಯನ್ನು ಪ್ರಸ್ತಾಪಿಸಿದ ವಿಪಕ್ಷಗಳ ಸದಸ್ಯರು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಘಟನೆಯನ್ನು ಪ್ರಸ್ತಾಪಿಸಿದ ಶಿವಸೇನಾ ಸದಸ್ಯರು, ಕ್ರಮಕ್ಕೆ ಆಗ್ರಹಿಸಿದರು.

ದಂತ ಮತ್ತು ವೈದ್ಯ ಕಾಲೇಜುಗಳ ಪ್ರವೇಶಕ್ಕಾಗಿನ ‘ನೀಟ್‌’ ನಿಂದ ತಮಿಳುನಾಡಿಗೆ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಡಿಎಂಕೆ ಸದಸ್ಯರು ಪ್ರತಿಭಟಿಸಿದರು.

ಈ ನಡುವೆ, ವಿರೋಧ ಪಕ್ಷಗಳ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌, ‘ಪ್ರತಿಭಟನೆಗಳ ಮೂಲಕ ವಿರೋಧ ಪಕ್ಷಗಳು ಸದನದ ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದರು.

ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ಗೆ ಸೂಚನೆ

‘ಸಂಸತ್‌ ಕಲಾಪ ವೀಕ್ಷಣೆಯೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್‌ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲ ಸದಸ್ಯರು ಈ ಆ್ಯಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ’ ಎಂದು ಸ್ಪೀಕರ್ ಓಂ ಬಿರ್ಲಾ ಸೂಚಿಸಿದರು.

‘ಕಲಾಪದ ನೇರ ಪ್ರಸಾರವನ್ನು ಈ ಆ್ಯಪ್‌ ನೆರವಿನಿಂದ ವೀಕ್ಷಿಸಬಹುದು. ದಾಖಲೆಗಳು, ಪ್ರಶ್ನೆ–ಉತ್ತರ ಪ್ರತಿಗಳನ್ನು, ಬುಲೆಟಿನ್‌ಗಳನ್ನು ಹಾಗೂ ಮಹತ್ವದ ದಾಖಲೆಗಳನ್ನು ಸಹ ವೀಕ್ಷಿಸಬಹುದು’ ಎಂದರು.

‘ಈ ಆ್ಯಪ್‌ ಡೌನ್‌ ಮಾಡಿಕೊಳ್ಳುವಂತೆ ನಿಮ್ಮ ಕ್ಷೇತ್ರದ ಜನರಿಗೂ ತಿಳಿಸಿ. ಸದನದಲ್ಲಿ ನಿಮ್ಮ ವರ್ತನೆ ಹೇಗಿರುತ್ತದೆ ಎಂಬುದನ್ನು ಸಹ ಅವರು ವೀಕ್ಷಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಸ್ಪೀಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.