ವಿರೋಧ ಪಕ್ಷಗಳ ಸದಸ್ಯರಿಗೆ ಬಾವಿಗಿಳಿದು ಪ್ರತಿಭಟನೆ
– ಪಿಟಿಐ ಚಿತ್ರ
ನವದೆಹಲಿ: ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅಪ್ರಕಟಿತ ಆತ್ಮಚರಿತ್ರೆ, ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಸೇರಿ ಹಲವು ವಿಷಯಗಳನ್ನು ಉಲ್ಲೇಖಿಸಿ ಮಂಗಳವಾರವೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.
ಗದ್ದಲದಿಂದಾಗಿ ಮಧ್ಯಾಹ್ನ 12 ಗಂಟೆಗೆ ಕಲಾಪವನ್ನು ಸ್ಪೀಕರ್ ಮುಂದೂಡಿದರು. ಮತ್ತೆ ಕಲಾಪ ಸೇರಿದರೂ ಗಲಾಟೆ ಮುಂದುವರಿಯಿತು. ಹೀಗಾಗಿ 2 ಗಂಟೆಗೆ ಸದನ ಮುಂದೂಡಲಾಗಿದೆ.
ನರವಣೆಯವರ ಪುಸ್ತಕದ ಭಾಗಗಳನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ನಿರಾಕರಿಸಿದ್ದರು. ಈ ವೇಳೆಯೂ ಪ್ರತಿಭಟನೆ ನಡೆದು, ಮಂಗಳವಾರಕ್ಕೆ ಕಲಾಪ ಮುಂದೂಡಿಕೆಯಾಗಿತ್ತು. ಆ ಬಗ್ಗೆ ಉಲ್ಲೇಖ ಮಾಡಬಾರದು ಎಂದು ಸ್ಪೀಕರ್ ಹೇಳಿದರೂ, ರಾಹುಲ್ ಗಾಂಧಿ ಪಟ್ಟು ಬಿಟ್ಟಿರಲಿಲ್ಲ.
ಮಂಗಳವಾರ ಸದನದ ಬಾವಿಗಿಳಿದ ಸದಸ್ಯರು ‘ಸರಂಡರ್ ಮೋದಿ’ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು. ಯೋಜಿತ ರೀತಿಯಲ್ಲಿ ಕಲಾಪಕ್ಕೆ ಅಡ್ಡಿಪಡಿಸುವುದು ಸದಸ್ಯರಿಗೆ ಯೋಗ್ಯವಲ್ಲ ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.
12 ಗಂಟೆಗೆ ಸದನ ಸೇರಿದಾಗ, ಮಣಿಕರ್ಣಿಕಾ ಘಾಟ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಸಮಾಜವಾದಿ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು. ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.