ಪಟ್ನಾ: ಮೇ 7ರಂದು ಜನಿಸಿದ ಮಕ್ಕಳಿಗೆ ‘ಸಿಂಧೂರ’, ‘ಸಿಂಧೂರಿ’, ‘ಸಿಂಧೂ’ ಎಂದು ಹೆಸರಿಡಲು ಬಿಹಾರದ ವಿವಿಧೆಡೆ ಪೋಷಕರು ಪೈಪೋಟಿಗೆ ಬಿದ್ದಿದ್ದಾರೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಭಾರತದ ಸಶಸ್ತ್ರ ಪಡೆಗಳು ಮೇ 7ರಂದು ನಡೆಸಿದ್ದ ಕ್ಷಿಪಣಿ ದಾಳಿಗೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿತ್ತು. ಹೀಗಾಗಿ, ಮೇ 7ರಂದು ಜನಿಸಿದ ಮಕ್ಕಳಿಗೆ ಇದಕ್ಕೆ ಸಾಮ್ಯವಿರುವ ಹೆಸರನ್ನಿಡಲು ಪೋಷಕರು ಮುಗಿಬಿದ್ದಿದ್ದಾರೆ.
ಮುಜಾಫ್ಫರ್‌ಪುರ ಜಿಲ್ಲೆಯ ಕಾಂಟಿ ನಿವಾಸಿ ಸುಷ್ಮಿತಾ ದೇವಿ ಅವರು ಮೇ 7ರಂದು ಜನಿಸಿದ ತಮ್ಮ ಮೊಮ್ಮಗನಿಗೆ ‘ಸಿಂಧೂರ’ ಎಂದು ಹೆಸರಿಟ್ಟಿದ್ದಾರೆ. ‘ಮೊಮ್ಮಗ ಬೆಳೆದು ದೊಡ್ಡವನಾಗುತ್ತಿದ್ದಂತೆ ತನ್ನ ಹೆಸರಿನ ಹಿನ್ನೆಲೆ ತಿಳಿದುಕೊಳ್ಳುತ್ತಾನೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ಭಾರತ ನಾಶಪಡಿಸಲು ‘ಸಿಂಧೂರ’ ಕಾರ್ಯಾಚರಣೆ ನಡೆಸಿದ ದಿನದಂದು ತಾನು ಹುಟ್ಟಿದ್ದು ಎಂಬುದನ್ನು ತಿಳಿದುಕೊಳ್ಳುವ ಮೂಲಕ, ತನ್ನ ಹೆಸರಿನ ಮಹತ್ವವನ್ನು ಅರಿಯುತ್ತಾನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ನನ್ನ ಮೊಮ್ಮಗ ವಿದ್ಯಾಭ್ಯಾಸ ಮುಗಿಸಿದ ಬಳಿಕ ಸಮವಸ್ತ್ರ ಧರಿಸಿ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇದೇ ರೀತಿಯ ಮುಜಾಫ್ಫರ್‌ಪುರದ 12 ಪೋಷಕರು, ಕತಿಹಾರ, ಮೋತಿಹಾರಿ, ಸೀತಾಮಡಿಯಲ್ಲಿನ ತಲಾ ಒಬ್ಬರು ಪೋಷಕರು ತಮ್ಮ ನವಜಾತ ಶಿಶುಗಳಿಗೆ ಈ ಹೆಸರುಗಳನ್ನಿಟ್ಟಿದ್ದಾರೆ. ಗಂಡು ಮಕ್ಕಳಿಗೆ ‘ಸಿಂಧೂರ’ ಎಂದು ಹೆಣ್ಣು ಮಕ್ಕಳಿಗೆ ‘ಸಿಂಧೂರಿ’ ಎಂದು ನಾಮಕರಣ ಮಾಡಿದ್ದಾರೆ.
‘ದೇಶಭಕ್ತಿಯ ಸಂಕೇತವಾಗಿ ಮಗಳಿಗೆ ಸಿಂಧೂರಿ ಎಂದು ಹೆಸರಿಟ್ಟಿದ್ದೇವೆ’ ಎಂದು ಕತಿಹಾರದ ರಾಖಿ ಮತ್ತು ಸಂತೋಷ್ ಮಂಡಲ್ ದಂಪತಿ ತಿಳಿಸಿದ್ದಾರೆ. ಮಗಳು ದೊಡ್ಡವಳಾದ ಬಳಿಕ ಸಶಸ್ತ್ರ ಪಡೆಗೆ ಸೇರಿ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಬಯಸಿದ್ದೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.