ಕೆಮ್ಮಿನ ಸಿರಪ್
ಪಿಟಿಐ ಚಿತ್ರ
ಛಿಂದ್ವಾರ: ಕೆಮ್ಮಿನ ಸಿರಪ್ ಸೇವನೆ ಬಳಿಕ ಮೂತ್ರಪಿಂಡ ವೈಫಲ್ಯವಾಗಿ 14 ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾದ ಪ್ರಕರಣದ ತನಿಖೆಗೆ ಮಧ್ಯಪ್ರದೇಶದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ತವ್ಯ ನಿರ್ಲಕ್ಷದ ಆರೋಪದ ಮೇಲೆ ಛಿಂದ್ವಾರದ ವೈದ್ಯ ಡಾ. ಪ್ರವೀಣ್ ಸೋನಿ ಎಂಬವರನ್ನು ಬಂಧಿಸಲಾಗಿದೆ. ಏತನ್ಮಧ್ಯೆ ಕೆಮ್ಮಿನ ಸಿರಫ್ 'ಕೋಲ್ಡ್‌ರಿಫ್' ತಯಾರಕ ಕಂಪನಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೃತ ಮಕ್ಕಳ ಪ್ರತಿ ಕುಟುಂಬಕ್ಕೆ ತಲಾ ₹ 4 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅದನ್ನು ಕುಟುಂಬದವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ಛಿಂದ್ವಾರ ಹೆಚ್ಚುವರಿ ಜಿಲ್ಲಾಧಿಕಾರಿ ಧೀರೇಂದ್ರ ಸಿಂಗ್ ತಿಳಿಸಿದ್ದಾರೆ.
ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಡಾ. ಸೋನಿ, 'ಕೋಲ್ಡ್‌ರಿಫ್' ಸೇವಿಸಿದ ಮಕ್ಕಳ ಆರೋಗ್ಯದಲ್ಲಿ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿರುವುದು ಒಂದು ತಿಂಗಳಿನಿಂದ ವರದಿಯಾಗುತ್ತಿದ್ದರೂ, ಅದೇ ಸಿರಪ್ ಅನ್ನು ಶಿಫಾರಸ್ಸು ಮಾಡುತ್ತಿದ್ದ ಎನ್ನಲಾಗಿದೆ. ಅವರ ಬಂಧನವನ್ನು ಖಂಡಿಸಿ ಸೋಮವಾರದಿಂದ ಪ್ರತಿಭಟನೆ ನಡೆಸುವುದಾಗಿ ಅವರ ಸಹೋದ್ಯೋಗಿಗಳು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ವೈಫಲ್ಯವನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಹಾಗೂ ಮೃತ ಮಕ್ಕಳ ಕುಟುಂಬದವರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಇಂದಿನಿಂದ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಕೂಡ ಘೋಷಿಸಿದೆ.
ತಮಿಳುನಾಡಿನ ಕಾಂಚೀಪುರಂ ಮೂಲದ ಸ್ರೆಸನ್ ಫಾರ್ಮಾ ಕಂಪನಿ ತಯಾರಿಸುವ 'ಕೋಲ್ಡ್‌ರಿಫ್' ಸಿರಪ್ ಮಾರಾಟ ನಿಷೇಧಿಸಿ ಮಧ್ಯಪ್ರದೇಶ ಸರ್ಕಾರ ಆದೇಶ ನೀಡಿದೆ. ಔಷಧದ ಮಾದರಿಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರಲ್ಲಿ 11 ಮಕ್ಕಳು ಪರೇಸಿಯಾ ಉಪ ವಿಭಾಗದವರು. ಇಬ್ಬರು ಛಿಂದ್ವಾರದವರು ಹಾಗೂ ಒಬ್ಬರು ಛೌರಯ್ ತಾಲ್ಲೂಕಿನವರು.
ಎಸ್‌ಐಟಿ ತಂಡದಲ್ಲಿ 12 ಮಂದಿ
ಪರೇಸಿಯಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಜೀತೇಂದ್ರ ಸಿಂಗ್ ಜಟ್ ನೇತೃತ್ವದ ಎಸ್‌ಐಟಿಯಲ್ಲಿ 12 ಸದಸ್ಯರಿದ್ದಾರೆ. ತನಿಖೆ ಸಲುವಾಗಿ ತಂಡವು ಫಾರ್ಮಾ ಕಂಪನಿಗೆ ಭೇಟಿ ನೀಡಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಧೀರೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.