ADVERTISEMENT

ಮಧ್ಯಪ್ರದೇಶ: ಕೋವಿಡ್ ಪರೀಕ್ಷೆಗೊಳಪಡದ ವ್ಯಕ್ತಿಗಳಿಗೂ ಪಾಸಿಟಿವ್ ವರದಿ

ಪಿಟಿಐ
Published 16 ಸೆಪ್ಟೆಂಬರ್ 2020, 12:17 IST
Last Updated 16 ಸೆಪ್ಟೆಂಬರ್ 2020, 12:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಿಹಾರ್: ಕೋವಿಡ್ ಪರೀಕ್ಷೆಗೊಳಪಡದೇ ಇರುವ ವ್ಯಕ್ತಿಗಳಿಗೂಕೋವಿಡ್-19 ರೋಗ ದೃಢಪಟ್ಟಿರುವ ವೈದ್ಯಕೀಯ ವರದಿ ನೀಡಿದ ಪ್ರಕರಣದಲ್ಲಿ ಇಬ್ಬರು ವೈದ್ಯಕೀಯ ಸಿಬ್ಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಿಸಾರ್‌ಪುರ್ ಬ್ಲಾಕ್‌ನ ಥಾನಾ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.

ತಮ್ಮ ನಿರ್ಲಕ್ಷ್ಯದಿಂದಾಗಿ ಗ್ರಾಮದ ಜನರಲ್ಲಿ ಭೀತಿ ಹುಟ್ಟಿಸಿದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.

ADVERTISEMENT

ಪ್ರಾಥಮಿಕ ತನಿಖೆಗಳ ಪ್ರಕಾರ ಬ್ಲಾಕ್ ಕಮ್ಯೂನಿಟಿ ಮೊಬಿಲೈಸರ್ (ಬಿಸಿಎಂ) ಮತ್ತು ಟೆಕ್ನಿಷಿಯನ್‌ನ ನಿರ್ಲಕ್ಷ್ಯದಿಂದ ಇದು ಸಂಭವಿಸಿದೆ.ಇತರ ವ್ಯಕ್ತಿಗಳಿಂದ ಸಂಗ್ರಹಿಸಿದ ಮಾದರಿಗಳು ಪರೀಕ್ಷಾ ಕಿಟ್‌ನಲ್ಲಿ ಅಸ್ತವ್ಯಸ್ಥಗೊಂಡು ಈವರೆಗೆ ಮಾದರಿಗಳನ್ನು ನೀಡದೇ ಇರುವ ವ್ಯಕ್ತಿಗಳಿಗೆ ಪರೀಕ್ಷಾ ವರದಿ ಕಳುಹಿಸಿಕೊಟ್ಟಿರುವ ಸಾಧ್ಯತೆ ಇದೆ ಎಂದು ಸಿಂಗ್ ಹೇಳಿದ್ದಾರೆ.

ತಕ್ಷಣವೇ ಬಿಸಿಎಂ ಬಚ್ಚನ್ ಮುಜಲ್ದಾ ಮತ್ತು ಟೆಕ್ನಿಷಿಯನ್ ಗುಮಾನ್ ಸಿಂಗ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೊರೊನಾವೈರಸ್ ದೃಢಪಟ್ಟಿರುವುದಾಗಿ ಗ್ರಾಮದ 12 ಮಂದಿಗೆ ತಿಳಿಸಲಾಗಿತ್ತು. ಥಾನಾ ಗ್ರಾಮದಲ್ಲಿ ಮಾದರಿ ಸಂಗ್ರಹಿಸುತ್ತಿದ್ದ ವೇಳೆ ತಾನು ಭೋಪಾಲ್‌ನಲ್ಲಿದ್ದೆ. ಒಟ್ಟು 4 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆರೋಗ್ಯ ಇಲಾಖೆಯ ತಂಡ ಬಂದು ಮಾದರಿ ಸಂಗ್ರಹಿಸದೇ 15 ಮಂದಿ ಗ್ರಾಮಸ್ಥರ ಮಾಹಿತಿ ಪಡೆದುಕೊಂಡಿತ್ತು. ಹೆಚ್ಚಿನವರು ಆ ಹೊತ್ತಲ್ಲಿ ಗ್ರಾಮದಲ್ಲಿರಲಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಈವರೆಗೆ 93,053 ಸೋಂಕು ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.