ADVERTISEMENT

ಮಧ್ಯ ಪ್ರದೇಶ: ನಿರ್ಮಾಣ ಹಂತದ ಸುರಂಗ ಕುಸಿತ, ಏಳು ಮಂದಿಯ ರಕ್ಷಣೆ

ಪಿಟಿಐ
Published 13 ಫೆಬ್ರುವರಿ 2022, 18:44 IST
Last Updated 13 ಫೆಬ್ರುವರಿ 2022, 18:44 IST
ರಕ್ಷಣಾ ಕಾರ್ಯಾಚರಣೆ – ಐಎಎನ್‌ಎಸ್ ಚಿತ್ರ
ರಕ್ಷಣಾ ಕಾರ್ಯಾಚರಣೆ – ಐಎಎನ್‌ಎಸ್ ಚಿತ್ರ   

ಕಟ್‌ನೀ (ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಕಟ್‌ನೀ ಜಿಲ್ಲೆಯ ಸ್ಲೀಮನಾಬಾದ್‌ನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು 9 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್ಗಿ ಕಾಲುವೆ ಯೋಜನೆಯ ಸುರಂಗ ಶನಿವಾರ ರಾತ್ರಿ ಕುಸಿದಿತ್ತು. 9 ಮಂದಿ ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿದ್ದರು. ಈ ಪೈಕಿ 7 ಮಂದಿಯನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ಇನ್ನೂ ಅವಶೇಷಗಳಡಿ ಇದ್ದಾರೆ ಎಂದು ಮಧ್ಯ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ರಾಜೇಶ್ ರಾಜೊರ ತಿಳಿಸಿದ್ದಾರೆ.

ಅವಶೇಷಗಳಡಿ ಇರುವ ಇಬ್ಬರು ಕಾರ್ಮಿಕರ ರಕ್ಷಣೆಗೆ ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಇಆರ್‌ಎಫ್) ತಂಡ ಮತ್ತು ಇತರ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಅವಶೇಷಗಳಡಿ ಇರುವ ಕಾರ್ಮಿಕರು ರಕ್ಷಣಾ ತಂಡದ ಸಿಬ್ಬಂದಿ ಅವರ ಕರೆಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಸ್ಲೀಮನಾಬಾದ್‌ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಘ ಮಿತ್ರ ಗೌತಮ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಟ್‌ನೀ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

‘ತಾಯಿಯನ್ನು ನೆನಪಿಸಿಕೊಂಡೆ..’

‘ಜೀವಂತವಾಗಿ ಹೊರಬರುವ ಭರವಸೆಯನ್ನೇ ನಾನು ಕಳೆದುಕೊಂಡಿದ್ದೆ. ಅವಶೇಷಗಳಡಿ ಸಿಲುಕಿ ಒಂದು ವೇಳೆ ನಾನು ಸತ್ತರೂ, ಆಘಾತಕ್ಕೊಳಗಾಗದೇ ಶಾಂತಿಯಿಂದಿರಲು ನನ್ನ ತಾಯಿಗೆ ತಿಳಿಸುವಂತೆ ನನ್ನೊಂದಿ
ಗಿದ್ದ ಕಾರ್ಮಿಕನಿಗೆ ಹೇಳಿದೆ’ ರಕ್ಷಿಸಲ್ಪಟ್ಟ ಕಾರ್ಮಿಕ ಮೋತಿ ಲಾಲ್ ಕೋಲ್ (30)ಹೇಳಿದರು.

‘ಮುಂದಿನ ಜನ್ಮದಲ್ಲಿ ನಾನು ಮತ್ತೇ ನನ್ನ ತಾಯಿಯ ಗರ್ಭದಲ್ಲಿಯೇ ಜನಿಸುತ್ತೇನೆ ಎಂಬುದಾಗಿ ತಿಳಿಸುವಂತೆ ನನ್ನ ಗೆಳೆಯ ನಂದಕುಮಾರ್ ಯಾದವ್‌ಗೆ ತಿಳಿಸಿದ್ದೆ’ ಎಂದು ಹೇಳಿದರು. ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.