ಮರಣದಂಡನೆ (ಪ್ರಾತಿನಿಧಿಕ ಚಿತ್ರ)
ಇಂದೋರ್: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಅತ್ತೆಯನ್ನು 95ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದ 24 ವರ್ಷದ ಮಹಿಳೆಗೆ ನ್ಯಾಯಾಲಯವು ಇಂದು (ಬುಧವಾರ) ಮರಣದಂಡನೆ ಶಿಕ್ಷೆ ವಿಧಿಸಿದೆ.
ಪ್ರಕರಣ ಸಂಬಂಧ ರೇವಾ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪದ್ಮಾ ಜಾತವ್ ಅವರು ವಿಚಾರಣೆ ನಡೆಸಿದ್ದು, ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿಕಾಸ್ ದ್ವಿವೇದಿ ಹೇಳಿದ್ದಾರೆ.
ಮಂಗಾವ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ರೈಲಾ ಗ್ರಾಮದ ನಿವಾಸಿ ಕಾಂಚನ್ ಕೋಲ್ ಎಂಬುವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2022ರಲ್ಲಿ ತನ್ನ 50 ವರ್ಷದ ಅತ್ತೆ ಸರೋಜ್ ಕೋಲ್ ಅವರನ್ನು 95ಕ್ಕೂ ಹೆಚ್ಚು ಬಾರಿ ಕುಡಗೋಲಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದರು.
ಅತ್ತೆ –ಸೊಸೆ ಇಬ್ಬರೇ ಮನೆಯಲ್ಲಿದ್ದ ವೇಳೆ ಹತ್ಯೆ ನಡೆದಿತ್ತು. ಘಟನೆ ಬಳಿಕ ಸರೋಜ್ ಕೋಲ್ ಅವರ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ದ್ವಿವೇದಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸರೋಜ್ ಕೋಲ್ ಅವರ ಪತಿ ವಾಲ್ಮಿಕ್ ಕೋಲ್ ಅವರನ್ನು ಸಹ ಆರೋಪಿ ಎಂದು ಹೆಸರಿಸಲಾಗಿದೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.