ADVERTISEMENT

ದಿ ಕೇರಳ ಸ್ಟೋರಿ | ತೆರಿಗೆ ವಿನಾಯಿತಿ ಹಿಂಪಡೆದ ಮಧ್ಯಪ್ರದೇಶ ಸರ್ಕಾರ: ಕೆ.ಕೆ ಮಿಶ್ರಾ

ಪಿಟಿಐ
Published 11 ಮೇ 2023, 3:06 IST
Last Updated 11 ಮೇ 2023, 3:06 IST
‘ದಿ ಕೇರಳ ಸ್ಟೋರಿ’
‘ದಿ ಕೇರಳ ಸ್ಟೋರಿ’   

ಭೂಪಾಲ್‌ : ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವ ನಿರ್ಧಾರವನ್ನು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಹಿಂಪಡೆದಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಕೆ.ಮಿಶ್ರಾ ಹೇಳಿದ್ದಾರೆ.

ಕೇರಳದ ಹಿಂದೂ ಯುವತಿಯರು ಇಸ್ಲಾಂಗೆ ಮತಾಂತರಗೊಂಡ ನಂತರ ಹೇಗೆ ಭಯೋತ್ಪಾದಕ ಸಂಘಟನೆಯ ಜಾಲಕ್ಕೆ ಬೀಳುತ್ತಾರೆ ಎಂಬ ಚಿತ್ರಕಥೆ ಹೊಂದಿರುವ ‘ದಿ ಕೇರಳ ಸ್ಟೋರಿ‘ ಸಿನಿಮಾಕ್ಕೆ ನಾಲ್ಕು ದಿನದ ಹಿಂದೆ ಮಧ್ಯಪ್ರದೇಶದ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿತ್ತು.

‘ನಿಯಮಗಳ ಪ್ರಕಾರ ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣಪತ್ರ ಹೊಂದಿರುವ ಚಲನಚಿತ್ರಗಳಿಗೆ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಲಾಗುವುದಿಲ್ಲ. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ 'ದಿ ಕೇರಳ ಸ್ಟೋರಿ' ಸಿನಿಮಾಕ್ಕೆ ನೀಡಿರುವ ತೆರಿಗೆ ವಿನಾಯಿತಿಯನ್ನು ಹಿಂಪಡೆದಿದೆ‘ ಎಂದು ಕೆ.ಕೆ.ಮಿಶ್ರಾ ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ರಾಜ್ಯ ಸಭಾ ಸದಸ್ಯ ಮತ್ತು ಹಿರಿಯ ವಕೀಲ ವಿವೇಕ್ ಟಂಖಾ, ’ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿರುವುದನ್ನು ಸರ್ಕಾರ ಹಿಂಪಡೆದಿದೆ ಎಂದು ನನ್ನೊಬ್ಬ ಸ್ನೇಹಿತ ಹೇಳಿದ್ದಾನೆ. ಇದು ಸರ್ಕಾರದ ವಿವೇಕಯುತ ನಡೆಯಾಗಿದ್ದು, ಸಮಾಜದ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ. ‘ದಿ ಕೇರಳ ಸ್ಟೋರಿ‘ ಯುವ ಜನರು ನೋಡುವಂತಹ ಸಿನಿಮಾವಲ್ಲ‘ ಎಂದು ಹೇಳಿದ್ದಾರೆ.

ಸರ್ಕಾರ ತೆರಿಗೆ ವಿನಾಯಿತಿ ಹಿಂಪಡೆದಿದೆ ಎಂಬ ಕಾಂಗ್ರೆಸ್ ನಾಯಕನ ಹೇಳಿಕೆಗೆ ಆಡಳಿತ ಪಕ್ಷದ ನಾಯಕರಾಗಲಿ, ಪಕ್ಷದ ವಕ್ತಾರರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.