ADVERTISEMENT

ಬೆಟ್ಟಿಂಗ್ ಪ್ರಕರಣ: ದಾಖಲೆಗಳ ಅನುವಾದಕ್ಕೆ ಧೋನಿಗೆ ₹10 ಲಕ್ಷ ಶುಲ್ಕ

ಪಿಟಿಐ
Published 12 ಫೆಬ್ರುವರಿ 2026, 14:45 IST
Last Updated 12 ಫೆಬ್ರುವರಿ 2026, 14:45 IST
<div class="paragraphs"><p>ಮದ್ರಾಸ್ ಹೈಕೋರ್ಟ್ ಹಾಗೂ ಎಂ.ಎಸ್ ಧೋನಿ</p></div>

ಮದ್ರಾಸ್ ಹೈಕೋರ್ಟ್ ಹಾಗೂ ಎಂ.ಎಸ್ ಧೋನಿ

   

– ಪಿಟಿಐ ಚಿತ್ರಗಳು

ಚೆನ್ನೈ: 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿದ್ದಕ್ಕಾಗಿ ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್‌ಕುಮಾರ್ ವಿರುದ್ಧ ದಾಖಲಿಸಿರುವ ₹ 100 ಕೋಟಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳ ಭಾಷಾಂತರಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.

ADVERTISEMENT

ಫೆ. 11ರಂದು ಮಧ್ಯಂತರ ಆದೇಶ ನೀಡುವಾಗ ನ್ಯಾಯಮೂರ್ತಿ ಆರ್‌.ಎನ್ ಮಂಜುಳ ಅವರು ಈ ಆದೇಶ ನೀಡಿದ್ದಾರೆ.

2025ರ ಅಕ್ಟೋಬರ್ 28ರ ಆದೇಶದ ಅನ್ವಯ, ಈ ಪ್ರಕರಣ ಸಂಬಂಧ ಸಿ.ಡಿ.ಗಳಲ್ಲಿರುವ ವಿಷಯಗಳನ್ನು ಲಿಖಿತ ರೂಪಕ್ಕೆ ತರುವ ಮತ್ತು ಭಾಷಾಂತರಿಸುವ ಕೆಲಸವನ್ನು ನ್ಯಾಯಾಲಯದ ಭಾಷಾಂತರಕಾರರು ವಹಿಸಿಕೊಂಡಿದ್ದಾರೆ. ಅದಕ್ಕೆ ಅಗತ್ಯವಿರುವ ಶುಲ್ಕವನ್ನು ಪಾವತಿಸುವ ಷರತ್ತಿನ ಮೇಲೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಭಾಷಾಂತರ ಪ್ರಕ್ರಿಯೆಯು ಬೃಹತ್ ಕೆಲಸವಾಗಿದ್ದು, ಪೂರ್ಣಗೊಳಿಸಲು ಕನಿಷ್ಠ ಒಬ್ಬ ಭಾಷಾಂತರಕಾರ ಮತ್ತು ಒಬ್ಬ ಟೈಪಿಸ್ಟ್ ಸುಮಾರು ಮೂರರಿಂದ ನಾಲ್ಕು ತಿಂಗಳುಗಳ ಕಾಲ ತಮ್ಮ ಸಂಪೂರ್ಣ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಸಿ.ಡಿ.ಗಳಲ್ಲಿನ ವಿಷಯಗಳ ಲಿಖಿತ ರೂಪ ಮತ್ತು ಅನುವಾದ ಕಾರ್ಯವನ್ನು ಮಾರ್ಚ್ 2026 ರ ಮೂರನೇ ವಾರದೊಳಗೆ ಪೂರ್ಣಗೊಳಿಸುವಂತೆ ಭಾಷಾಂತರಕಾರರಿಗೆ ನ್ಯಾಯಮೂರ್ತಿಗಳು ನಿರ್ದೇಶಿದ್ದಾರೆ.

₹10 ಲಕ್ಷ ವೆಚ್ಚವನ್ನು ಮದ್ರಾಸ್ ಹೈಕೋರ್ಟ್‌ನ 'ಮುಖ್ಯ ನ್ಯಾಯಾಧೀಶರ ಪರಿಹಾರ ನಿಧಿ'ಗೆ ಮಾರ್ಚ್ 12ರೊಳಗೆ ಪಾವತಿಸಬೇಕು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಅದೇ ದಿನಕ್ಕೆ ಮುಂದೂಡಿದ್ದಾರೆ.

ಯಾವ ಭಾಷೆಯಿಂದ ಯಾವ ಭಾಷೆಗೆ ಅನುವಾದ ಮಾಡಲಾಗುತ್ತದೆ ಎನ್ನುವುದು ಗೊತ್ತಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.