
ಮದುರೆ(ತಮಿಳುನಾಡು): ‘ನ್ಯಾಯಾಲಯ ಸೂಚಿಸುವ ಐದು ಜನರು ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ತೆರಳಿ, ಅಲ್ಲಿನ ದೀಪದ ಸ್ತಂಭದ ಬಳಿ ಸಾಂಕೇತಿಕವಾಗಿ 15 ನಿಮಿಷ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬೇಕು’ ಎಂದು ಮದುರೆ ಜಿಲ್ಲಾಡಳಿತಕ್ಕೆ ಮದ್ರಾಸ್ ಹೈಕೋರ್ಟ್ ಸಲಹೆ ನೀಡಿದೆ.
ಬೆಟ್ಟದ ಮೇಲಿನ ದೀಪಸ್ತಂಭದ ಮೇಲೆ ದೀಪ ಹಚ್ಚುವುದಕ್ಕೆ ಅನುಮತಿ ನೀಡುವಂತೆ ನಿರ್ದೇಶನ ನೀಡಿ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶ ಪಾಲನೆ ಮಾಡಿಲ್ಲ ಎಂದು ದೂರಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ, ಹೈಕೋರ್ಟ್‌ನ ಮದುರೆ ಪೀಠ ಈ ಸಲಹೆ ನೀಡಿದೆ.
‘ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶವನ್ನು ಗೌರವಿಸಲು ಸರ್ಕಾರ ಇಚ್ಛಿಸಿದಲ್ಲಿ, ಸಾಂಕೇತಿಕವಾಗಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬಹುದು. ಇದು ಕೂಡ ಸಲಹೆ ಮಾತ್ರವೇ ಆಗಿದ್ದು ನಿರ್ದೇಶನವಲ್ಲ’ ಎಂದು ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಅವರೂ ಇರುವ ಪೀಠ ಹೇಳಿದೆ.
‘ತಿರುಪರನ್‌ಕುಂದ್ರಂ ಬೆಟ್ಟದ ಮೇಲಿನ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಹಚ್ಚುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ರಾಜ್ಯದ ಖನಿಜಗಳು ಮತ್ತು ಗಣಿಗಾರಿಕೆ ಸಚಿವ ಎಸ್.ರಘುಪತಿ ಹೇಳಿದ್ದರು. ಈ ಮೂಲಕ ಅವರು, ದುರುದ್ದೇಶಪೂರಿತ ರಾಜಕೀಯಕ್ಕಾಗಿ ಈ ಪ್ರಕರಣವನ್ನು ತಿರುಚಿದ್ದಾರೆ’ ಎಂದು ಪೀಠ ಹೇಳಿದೆ.
ಕಳೆದ ವರ್ಷ ಡಿಸೆಂಬರ್ 1ರಂದು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ ಬಗ್ಗೆ ವಿವರಣೆ ನೀಡಿ ಮದುರೆ ಜಿಲ್ಲಾಧಿಕಾರಿ ಕೆ.ಜೆ.ಪ್ರವೀಣ ಕುಮಾರ್ ತಮ್ಮ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದರು.
‘ಕಾನೂನು–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಬೆಟ್ಟದ ಮೇಲೆ ಕಾರ್ತಿಕ ದೀಪ ಹಚ್ಚುವ ವಿಧಿಗೆ ಅನುಮತಿ ನೀಡಿ ಹೈಕೋರ್ಟ್‌ನ ಮದುರೆ ಪೀಠ ನೀಡಿದ್ದ ಆದೇಶವನ್ನು ದೇವಸ್ಥಾನ ಆಡಳಿತ ಮಂಡಳಿ ಜಾರಿಗೊಳಿಸುವುದನ್ನು ತಡೆಯುವುದಕ್ಕಾಗಿ ಅಲ್ಲ’ ಎಂದು ಜಿಲ್ಲಾಧಿಕಾರಿ ವಿವರಿಸಿದ್ದರು.
ಈ ಬಗ್ಗೆ ಮಾರ್ಚ್ 2ರಂದು ನಡೆದ ವಿಚಾರಣೆ ವೇಳೆ ಪ್ರಸ್ತಾಪಿಸಿದ ನ್ಯಾಯಮೂರ್ತಿ ಸ್ವಾಮಿನಾಥನ್,‘ಜಿಲ್ಲಾಧಿಕಾರಿ ಹೊರಡಿಸಿದ್ದ ನಿಷೇಧಾಜ್ಞೆ ಆದೇಶವನ್ನೇ ನೆಪ ಮಾಡಿಕೊಂಡಿದ್ದ ಪೊಲೀಸರು ದೀಪ ಬೆಳಗಲು ಅವಕಾಶ ನೀಡಿಲ್ಲ. ಜಿಲ್ಲಾಧಿಕಾರಿ ಆದೇಶವನ್ನಷ್ಟೆ ನಾವು ಪಾಲನೆ ಮಾಡುವುದಾಗಿ ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಅಭಿಪ್ರಾಯಪಟ್ಟರು..
ನಂತರ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.