
ರ‍್ಯಾಲಿ
ಚೆನ್ನೈ: ರಾಜಕೀಯ ಸಭೆಗಳು ಮತ್ತು ರ‍್ಯಾಲಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ 2026ರ ಜನವರಿ 5ರ ಒಳಗಾಗಿ ಅಂತಿಮ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ನಿಗದಿಪಡಿಸುವಂತೆ ತೆಲಂಗಾಣ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜಕೀಯ ಪಕ್ಷಗಳಿಂದ ಆಕ್ಷೇಪಗಳು ಮತ್ತು ಸಲಹೆಗಳನ್ನು ಪಡೆದು ಎಸ್‌ಒಪಿ ನಿಗದಿಪಡಿಸಿವಂತೆ ನ್ಯಾಯಾಲಯವು ಶುಕ್ರವಾರ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಂ.ಎಂ.ಶ್ರೀವಾತ್ಸವ ಮತ್ತು ನ್ಯಾಯಮೂರ್ತಿ ಜಿ. ಆರುಳ್ ಮುರುಗನ್ ನೇತೃತ್ವದ ನ್ಯಾಯಪೀಠವು, ‘ತಮಿಳುನಾಡು ಸರ್ಕಾರ ಸಿದ್ಧಪಡಿಸಿದ್ದ ಕರಡು ಎಸ್‌ಒಪಿಯಲ್ಲಿ ಯಾವುದೇ ಬದಲಾವಣೆ ಮಾಡಲು ಆದೇಶಿಸಿಲ್ಲ. ಆದರೆ ಅಂತಿಮ ಎಸ್ಒಪಿಯು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ’ ಎಂದು ತಿಳಿಸಿದೆ.
ಎಸ್‌ಒಪಿ ರಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ತಮಿಳುನಾಡು ಸರ್ಕಾರವು ನವೆಂಬರ್ 6ರಂದು ಸರ್ವ ಪಕ್ಷಗಳ ಸಭೆಯನ್ನು ಕರೆದಿತ್ತು. ಆದರೆ ಕರಡು ಎಸ್ಒಪಿಯಲ್ಲಿನ ಕೆಲವು ಷರತ್ತುಗಳು ವಾಸ್ತವಕ್ಕೆ ವಿರುದ್ಧವಾಗಿವೆ ಎಂದು ಹಲವು ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ರಾಜಕೀಯ ಪಕ್ಷಗಳಿಂದ ಆಕ್ಷೇಪಗಳು ಮತ್ತು ಸಲಹೆಗಳನ್ನು ಪಡೆಯುವಂತೆ ಕೋರ್ಟ್ ತಿಳಿಸಿದೆ.
ಇತ್ತೀಚೆಗೆ ಕರೂರಿನಲ್ಲಿ ನಟ ವಿಜಯ್ ಅವರು ನಡೆಸಿದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟ ದುರಂತದ ಬಳಿಕ ಇಂಥ ಅವಘಡಗಳನ್ನು ತಡೆಯುವ ಉದ್ದೇಶದಿಂದ ಎಸ್‌ಒಪಿ ರಚನೆಗೆ ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.