
ಚೆನ್ನೈ: ತಮಿಳುನಾಡು ಉನ್ನತ ಶಿಕ್ಷಣ ಸಚಿವ ಗೋವಿ ಚೆಳಿಯನ್ ಅವರು ಗುರುವಾರ ರಾಜ್ಯಪಾಲ ಆರ್.ಎನ್.ರವಿ ಅವರು ಅಧ್ಯಕ್ಷತೆ ವಹಿಸಿದ್ದ ಮದ್ರಾಸ್ ವಿಶ್ವವಿದ್ಯಾಲಯದ 167ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.
‘ರಾಜ್ಯಪಾಲರು ಚುನಾಯಿತ ಸರ್ಕಾರದ ವಿರುದ್ಧ ನಡೆದುಕೊಳ್ಳುತ್ತಿದ್ದು, ಪದವಿ ಪ್ರದಾನ ಮಾಡಲು ರಾಜ್ಯಪಾಲರಿಗೆ ಯಾವುದೇ ಅರ್ಹತೆ ಇಲ್ಲ’ ಎಂದು ತಿಳಿಸಿದ್ದಾರೆ.
‘ರಾಜ್ಯಪಾಲ ಆರ್.ಎನ್.ರವಿ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಯಾವುದೇ ಅರ್ಹತೆ ಹೊಂದಿಲ್ಲ. ಹೀಗಾಗಿ, ಮದ್ರಾಸ್ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮದಿಂದಲೇ ದೂರ ಉಳಿಯುತ್ತೇನೆ’ ಎಂದು ಚೆಳಿಯನ್ ಅವರು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆ ಅಧಿವೇಶನದ ಮೊದಲ ದಿನ ರಾಜ್ಯಪಾಲ ಆರ್.ಎನ್.ರವಿ ಅವರು ಭಾಷಣ ಮಾಡದೇ, ಹೊರ ನಡೆದಿದ್ದನ್ನು ಟೀಕಿಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಹೊರಿಸುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ರಾಜ್ಯಪಾಲರು ಚುನಾಯಿತ ಸರ್ಕಾರ ಹಾಗೂ ಸಂವಿಧಾನದ ವಿರುದ್ಧ ನಡೆದುಕೊಂಡಿದ್ದಾರೆ. ರವಿ ಅವರು ಸದನದ ಘನತೆಗೆ ಕುಂದುತಂದಿದ್ದು, ತಮಿಳು ಭಾಷೆ ಹಾಗೂ ತಮಿಳರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದ್ದಾರೆ.
ಘಟಿಕೋತ್ಸವವು ಗುರುವಾರ ಬೆಳಿಗ್ಗೆ 10.30ಕ್ಕೆ ಕುಲಪತಿ ಅವರ ಅನುಪಸ್ಥಿತಿಯಲ್ಲಿ ನಡೆಯಿತು. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಪಿ.ಶಂಕರ್ ಅವರು ಪ್ರಮಾಣಪತ್ರಗಳಿಗೆ ಸಹಿ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.